ಮುಸ್ಲಿಮರನ್ನು ಮನುಷ್ಯರೇ ಅಲ್ಲ ಎಂಬಂತೆ ಬಿಂಬಿಸುತ್ತಿರುವ ಬಿಜೆಪಿ-ಕಾಂಗ್ರೆಸ್: ಸಿ.ಎಂ. ಇಬ್ರಾಹೀಂ ಆಕ್ರೋಶ

Prasthutha|

ಬೆಂಗಳೂರು: ಮುಸ್ಲಿಮರ ಹೆಸರು ಇಟ್ಟುಕೊಂಡವರು ಯಾರೂ ಮನುಷ್ಯರೇ ಅಲ್ಲ ಎಂಬಂತೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್ ಬಿಂಬಿಸುತ್ತಿದೆ ಎಂದು ಕರ್ನಾಟಕ ಪ್ರದೇಶ ಜನತಾದಳ (ಜಾತ್ಯಾತೀತ) ಪಕ್ಷದ ರಾಜ್ಯಾಧ್ಯಕ್ಷರಾದ ಸಿ.ಎಂ. ಇಬ್ರಾಹೀಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಜೆಪಿಗಂತೂ ಮುಸಲ್ಮಾನರೆಂದರೆ ಅಪಥ್ಯ ಮತ್ತು ಸದಾ ಕಾಲ ಮುಸಲ್ಮಾನರ ಮೇಲೆ ದ್ವೇಷ ಕಾರುವುದೇ ಇವರ ಜಾಯಮಾನ ಆದರೆ ಮುಸಲ್ಮಾನರನ್ನು ಗುತ್ತಿಗೆ ತೆಗೆದುಕೊಂಡಂತೆ ವರ್ತಿಸುವ ಕಾಂಗ್ರೆಸ್ ಪಕ್ಷ ಕೂಡ ಖಾನ್,ಉಲ್ಲಾ,ಶೇಖ್ ಎಂಬ ಮುಸಲ್ಮಾನರ ಹೆಸರುಗಳನ್ನು ಮತ್ತು ವೇಷಭೂಷಣಗಳನ್ನು ವ್ಯಂಗ್ಯ ಮತ್ತು ಹೀಯಾಳಿಕೆಗೆ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಮುಸಲ್ಮಾನರನ್ನು ಯಾರು ಹೇಗೆ ಬೇಕಾದರೂ ತುಚ್ಛವಾಗಿ ಕಾಣಬಹುದು ಎಂದುಕೊಂಡಿದ್ದಾರೆ, ಇವರಿಬ್ಬರ ಹೆಸರು ಬೇರೆ ಆದರೆ ಉದ್ದೇಶ ಮಾತ್ರ ಒಂದೇ, ಸಮುದಾಯಗಳ ನಡುವೆ ದ್ವೇಷ ಬಿತ್ತಿ ಚಳಿ ಕಾಯಿಸಿಕೊಳ್ಳುವುದೇ ಇವರ ನಿತ್ಯ ಕಾಯಕ ಎಂದು ಅವರು ಹೇಳಿದ್ದಾರೆ.

- Advertisement -

ಆ ಹೆಸರುಗಳನ್ನು ಇಟ್ಟುಕೊಂಡಿರುವರು ಯಾರೂ ಮನುಷ್ಯರೇ ಅಲ್ಲ ಎಂಬಂತೆ ಬಿಂಬಿಸುತ್ತಿರುವುದು ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನು ಸಾಬೀತು ಮಾಡಿವೆ. ಬಿಜೆಪಿ ಸೂತ್ರಧಾರಿ, ಕಾಂಗ್ರೆಸಿಗರು ಪಾತ್ರಧಾರಿ, ಇವರ ಪಾಲಿಗೆ ಮುಸಲ್ಮಾನರು ಅಬ್ಬೇಪಾರಿ ಎನ್ನುವುದು ಅಕ್ಷರಶಃ ಜಗಜ್ಜಾಹೀರಾಗಿದೆ. ಮುಸಲ್ಮಾನರು ಪ್ರಬುದ್ಧರಾಗಿದ್ದಾರೆ ಎನ್ನುವುದನ್ನು ಈ ಎರಡು ಭಂಡ ರಾಷ್ಟ್ರೀಯ ಪಕ್ಷಗಳು ಮರೆಯಬಾರದು ಎಂದು ಸಿ.ಎಂ. ಇಬ್ರಾಹೀಂ ಎಚ್ಚರಿಕೆ ನೀಡಿದ್ದಾರೆ.



Join Whatsapp