ರಾಂಪುರ: ಮಾಜಿ ಸಂಸದೆ ಹಾಗೂ ಒಂದು ಕಾಲದ ಸೂಪರ್ ಸ್ಟಾರ್ ಚಿತ್ರನಟಿ ಜಯಪ್ರದಾ ವಿರುದ್ಧ ಉತ್ತರ ಪ್ರದೇಶದ ಸಂಸದ – ಶಾಸಕರ ವಿಶೇಷ ನ್ಯಾಯಾಲಯ ನಾಲ್ಕನೇ ಬಾರಿಗೆ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ.
ಈ ವಾರಂಟ್ ಜಾರಿಯಾದ ಬಳಿಕ ಈಗ ಪೊಲೀಸರು ಅವರನ್ನು ಎಲ್ಲಿಂದಲ್ಲಾದರೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆ ಇದೆ. 2019ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಯಪ್ರದಾ ವಿರುದ್ಧ ಈ ವಾರಂಟ್ ಜಾರಿಯಾಗಿದೆ.
ಜಯಪ್ರದಾ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ರಾಂಪುರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದರು. ಚುನಾವಣಾ ಪ್ರಚಾರದ ವೇಳೆ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, ರಾಂಪುರದ ಸಂಸದ – ಶಾಸಕ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವು ಪದೇ ಪದೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಆದರೆ, ಅವರು ವಿಚಾರಣೆಗೆ ಬರಲಿಲ್ಲ. ಇದೀಗ ನ್ಯಾಯಾಲಯದಿಂದ ಅವರ ಹೆಸರಿಗೆ ವಾರಂಟ್ ಜಾರಿಯಾಗಿದೆ. ಈ ಹಿಂದೆ ವಾರಂಟ್ ಜಾರಿಯಲ್ಲಿದ್ದರೂ ಅವರು ವಿಚಾರಣೆಗೆ ಬಾರದಿದ್ದರಿಂದ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ.