ಕೋಟಾ: ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಕ್ರೌರ್ಯವೆಸಗಿ, ಗಾಂಧಿ ಹಂತಕರನ್ನು ವೈಭವೀಕರಿಸುತ್ತಿದೆ ಎಂದು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಕಿಡಿಗಾರಿದ್ದಾರೆ.
ಇಂದು ರಾಜಸ್ಥಾನದ ಉದಯಪುರದಲ್ಲಿ ನಡೆದ ಪಕ್ಷದ ಚಿಂತನ್ ಶಿವರ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉರಿಯುತ್ತಿರುವ ದ್ವೇಷದ ಬೆಂಕಿಯು ಜನರ ಜೀವನದ ಮೇಲೆ ಭಾರಿ ನಷ್ಟವನ್ನುಂಟು ಮಾಡಿದೆ ಎಂದಿದ್ದಾರೆ.
ಇದು ಸಾಮಾಜಿಕವಾಗಿ ಕೆಟ್ಟ ಪರಿಣಾಮ ಹೊಂದಿದ್ದು, ನಾವು ಊಹಿಸುವುದಕ್ಕಿಂತ ಹೆಚ್ಚು ಗಂಭೀರವಾಗಿದೆ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.
ಶುಕ್ರವಾರದಂದು ರಾಜಸ್ಥಾನದ ಉದಯಪುರದಲ್ಲಿ ಕಾಂಗ್ರೆಸ್ ನ ಮೂರು ದಿನಗಳ ಚಿಂತನ್ ಶಿಖರ್, ಚಿಂತನ – ಮಂಥನ ಅಧಿವೇಶನ ಪ್ರಾರಂಭವಾಗಿದೆ. ಈ ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಸುಮಾರು 400 ಮುಖಂಡರು ಭಾಗವಹಿಸಿದ್ದಾರೆ.
ಬಿಜೆಪಿ, ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳ ನೀತಿಗಳ ಪರಿಣಾಮವಾಗಿ ದೇಶವು ಎದುರಿಸುತ್ತಿರುವ ಹಲವಾರು ಸವಾಲುಗಳನ್ನು ನಮ್ಮ ನಡುವೆ ಚರ್ಚಿಸಲು ‘ನವ್ ಸಂಕಲ್ಪ ಚಿಂತನ್ ಶಿವರ್’ ಅವಕಾಶ ನೀಡುತ್ತದೆ ಎಂದು ಸೋನಿಯಾ ಗಾಂಧಿ ಸಭಿಕರಿಗೆ ತಿಳಿಸಿದರು.
ಪಕ್ಷದ ಕುರಿತು ಬಹಿರಂಗವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತೆ ಸೋನಿಯಾ ಗಾಂಧಿ ಮುಖಂಡರನ್ನು ಒತ್ತಾಯಿಸಿದ್ದಾರೆ.