ಘಾಝಿಪುರದಲ್ಲಿ ಬಿಜೆಪಿ-ಎಎಪಿ ಕಾರ್ಯಕರ್ತರ ಮುಖಾಮುಖಿ

Prasthutha|

ನವದೆಹಲಿ: ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯ ಹೆಸರಿನಲ್ಲಿ ಪರಸ್ಪರರ ವಿರುದ್ಧ ಘೋಷಣೆಗಳನ್ನು ಕೂಗಿ ಮುಖಾಮುಖಿಯಾದ ಘಟನೆ ದೆಹಲಿಯ ಘಾಝಿಪುರದಲ್ಲಿ ನಡೆದಿದೆ.

- Advertisement -

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಘಾಝಿಪುರದ ಹೂಳು ತುಂಬುವ ಸ್ಥಳಕ್ಕೆ ಭೇಟಿ ನೀಡಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಈ ಮಧ್ಯೆ ಸ್ಥಳಕ್ಕಾಗಮಿಸಿದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬಿಜೆಪಿಯ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಪ್ಪು ಭಾವುಟ ಪ್ರದರ್ಶಿಸಿ ಬಿಜೆಪಿ ಪ್ರತಿಭಟನೆ ನಡೆಸಿದರೆ, ಇದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆ ಕೂಗುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಇದರಿಂದಾಗಿ ಎರಡೂ ಪಕ್ಷದ ಕಾರ್ಯಕರ್ತರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ದೆಹಲಿ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಎರಡೂ ಕಡೆಯವರನ್ನು ಸಮಾಧಾನಪಡಿಸಿರುವುದು ವೀಡಿಯೋದಲ್ಲಿ ಕಾಣಬಹುದಾಗಿದೆ.



Join Whatsapp