ಶಹಜಹಾನ್‌ಪುರ: ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ಚಿನ್ಮಯಾನಂದ ಆಶ್ರಮ ನಡೆಸುತ್ತಿದ್ದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ತೀವ್ರ ಸುಟ್ಟಗಾಯಗಳೊಂದಿಗೆ ನಗ್ನವಾಗಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಹೇಳಿಕೆಯನ್ನು ಆಧರಿಸಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಸೋಮವಾರ ರಾಯ್‌ಖೇಡ ಗ್ರಾಮದ ಗದ್ದೆಯೊಂದರಲ್ಲಿ ಮೂರು ಮಂದಿ ತನ್ನ ಮೇಲೆ ಅತ್ಯಾಚಾರ ನಡೆಸುವ ಯತ್ನ ನಡೆಸಿದ್ದರು ಎಂದು ಸಂತ್ರಸ್ತ ಯುವತಿ ಮ್ಯಾಜಿಸ್ಟ್ರೇಟರ ಮುಂದೆ ಹೇಳಿಕೆ ನೀಡಿದ್ದಳು. ಅತ್ಯಾಚಾರ ಎಸಗಲು ಸಾಧ್ಯವಾಗದೇ ಇದ್ದಾಗ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಯುವತಿ ವಿವರಿಸಿದ್ದಾಳೆ.
ವಿದ್ಯಾರ್ಥಿನಿ ನೀಡಿದ ಹೇಳಿಕೆಯನ್ನು ಆಧರಿಸಿ ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ), 120 ಬಿ (ಅಪರಾಧ ಪಿತೂರಿ), 201 (ಸಾಕ್ಷ್ಯ ನಾಶ) ಸೇರಿದಂತೆ ಇತರ ಸೆಕ್ಷನ್‌ಗಳ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಇದಕ್ಕೂ ಮುನ್ನ ಐಪಿಸಿ ಸೆಕ್ಷನ್ 307ರ ಅನ್ವಯ (ಕೊಲೆ ಯತ್ನ) ಪ್ರಕರಣ ದಾಖಲಿಸಲಾಗಿತ್ತು.
ಯುವತಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಲ್ಲಿ ಹೇಳಿಕೆ ದಾಖಲಿಸಿದ್ದು, ಈ ಸಂಬಂಧ ವಿದ್ಯಾರ್ಥಿನಿಯ ಸ್ನೇಹಿತೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ವಿದ್ಯಾರ್ಥಿನಿಯ ಸ್ನೇಹಿತೆ ಸಂತ್ರಸ್ತೆಯನ್ನು ರಾಯ್‌ಖೇಡಾ ಗ್ರಾಮಕ್ಕೆ ಕಳುಹಿಸಿದ್ದಳು ಎನ್ನಲಾಗಿದೆ. ಬೇರೆ ಬೇರೆ ಸ್ಥಳಗಳಲ್ಲಿದ್ದ ಆರೋಪಿಗಳನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಎಸ್.ಆನಂದ್ ತಿಳಿಸಿದ್ದಾರೆ.
ತನ್ನ ಸ್ನೇಹಿತೆ ಆಕೆಯ ಸೋದರ ಸಂಬಂಧಿ ಮತ್ತು ಸಹಪಾಠಿಯನ್ನು ರಾಯ್‌ಖೇಡಾ ಗ್ರಾಮದಲ್ಲಿ ಭೇಟಿ ಮಾಡುವಂತೆ ಕಳುಹಿಸಿಕೊಟ್ಟಿದ್ದಳು. ತಾನು ಕೂಡಾ ಶೀಘ್ರವೇ ತಮ್ಮ ಬಳಿ ಬರುವುದಾಗಿ ಹೇಳಿದ್ದಳು ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾಳೆ.