ಬೆಂಗಳೂರು: ಶಾಲಾ ದಾಖಲಾತಿ, ಉದ್ಯೋಗ, ವಿವಾಹ ನೋಂದಣಿ ಸೇರಿದಂತೆ ವಿವಿಧ ಸರಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಕೂಡ ಜನನ ಪ್ರಮಾಣ ಪತ್ರ ಅಗತ್ಯ ದಾಖಲೆಯಾಗಿದೆ. ಆದರೆ ಮಗು ಜನಿಸಿದ ನಂತರದಲ್ಲಿ ಜನನ ಪ್ರಮಾಣ ಪತ್ರ ಪಡೆಯಲು ತಿಂಗಳವರೆಗೂ ಕಾಯಬೇಕಾದ ಪರಿಸ್ಥಿತಿಯಿದ್ದು, ಇದೀಗ ಆರೋಗ್ಯ ಇಲಾಖೆ ಇ-ಜನ್ಮ ತಂತ್ರಾಂಶದ ಸಕಾಲ ಮಿತಿಯನ್ನು 15ರಿಂದ 7 ದಿನಕ್ಕೆ ಇಳಿಸಲು ಮುಂದಾಗಿದೆ.
ಸಾಕಷ್ಟು ಕಡೆಗಳಲ್ಲಿ ಈ ಜನನ ಪ್ರಮಾಣ ಪತ್ರವನ್ನು ಪಡೆಯಲು ಪೋಷಕರು ಅಲೆದಾಡುವ ಪರಿ ಸ್ಥಿತಿ ನಿರ್ಮಾಣವಾಗುತ್ತಿದೆ.
ಇದರಿಂದ ಸರಕಾರ 7 ದಿನಗಳಲ್ಲಿ ಜನನ ಪ್ರಮಾಣ ನೀಡಲು ಕ್ರಮವಹಿಸಿದೆ.
ಇದಕ್ಕಾಗಿ ಇ – ಜನ್ಮ ತಂತ್ರಾಂಶದ ಸಕಾಲ ಮಿತಿಯನ್ನು 15ರಿಂದ 7 ದಿನಕ್ಕೆ ಇಳಿಸಿದ್ದು, ಸೇವಾ ಸಿಂಧು ತಂತ್ರಾಂಶದಲ್ಲಿ ಜನನ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಜತೆಗೆ ಅರ್ಜಿದಾರರ ದಾಖಲೆಗಳನ್ನು ಸುರಕ್ಷಿತವಾಗಿಡುವಂತೆ ಸೂಚನೆ ನೀಡಿದೆ.
ಸಕಾಲದಲ್ಲಿ ಜನನ, ಮರಣ ಪ್ರಮಾಣ ಪತ್ರಗಳನ್ನು ಪಡೆಯಲು 7 ದಿನಗಳ ಕಾಲಾವಧಿ ನಿಗದಿಪಡಿಸಲಾಗಿದೆ. ಅರ್ಜಿದಾರರು ಒದಗಿಸಿದ ದಾಖಲೆಗಳನ್ನು ಸುರಕ್ಷಿತವಾಗಿಡಬೇಕು ಹಾಗೂ ಮತ್ತೆ ದಾಖಲೆಗಳನ್ನು ಕೇಳಬಾರದು. ಈ ಕುರಿತಂತೆ ಎಲ್ಲಾ ಅಧಿಕಾರಿಗಳಿಗೂ ಸೂಕ್ತ ನಿರ್ದೇಶನ ನೀಡಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಕೆಬಿ ಶಿವಕುಮಾರ್ ಹೇಳಿದ್ದಾರೆ.