ಗುಜರಾತ್ : 2002ರಲ್ಲಿ ಗುಜರಾತ್ ನಲ್ಲಿ ಸಂಘಪರಿವಾರ ಪ್ರಾಯೋಜಿತ ಗೋದ್ರಾ ಹತ್ಯಾಕಾಂಡದ ವೇಳೆ ಬಿಲ್ಕಿಸ್ ಬಾನೊ ಎಂಬ ಮಹಿಳೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ, ನ್ಯಾಯಾಲಯವೇ ಅಪರಾಧಿಗಳು ಎಂದು ಘೋಷಿಸಿದವರನ್ನು ‘ಸಂಸ್ಕಾರಿ ಬ್ರಾಹ್ಮಣರು’ ಎಂದು ಕರೆದ ಚಂದ್ರಸಿಂಗ್ ರೌಲ್‌ಜಿ ಅವರಿಗೆ ಬಿಜೆಪಿಯು ಗುಜರಾತ್‌ನ ಗೋದ್ರಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದೆ.
ಚಂದ್ರಸಿಂಗ್ ರೌಲ್‌ಜಿ ಅವರು ಮಾಜಿ ಸಚಿವರಾಗಿದ್ದು, ಆರು ಬಾರಿ ಶಾಸಕರೂ ಆಗಿದ್ದಾರೆ. ಈಗ ಅವರಿಗೆ ಗೋದ್ರಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಇದಕ್ಕೆ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗುತ್ತಿವೆ. ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ, ಅವರ ಮೂರು ವರ್ಷದ ಮಗಳು ಸೇರಿ ಒಂದೇ ಕುಟುಂಬದ ಒಂಬತ್ತು ಜನರನ್ನು ಕೊಂದ ಪ್ರಕರಣದಲ್ಲಿ ಅಪರಾಧಿಗಳು ಎಂದು ಸಾಬೀತಾದವರನ್ನು ಕಳೆದ ಆಗಸ್ಟ್ 15ರಂದು ಗುಜರಾತ್ ಸರ್ಕಾರ ಬಿಡುಗಡೆ ಮಾಡಿದೆ. ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಚಂದ್ರಸಿಂಗ್ ರೌಲ್‌ಜಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.
‘ಜೈಲಿನಿಂದ ಬಿಡುಗಡೆಯಾದವರು ಬ್ರಾಹ್ಮಣರಾಗಿದ್ದು, ಅವರಿಗೆ ಒಳ್ಳೆಯ ಸಂಸ್ಕಾರವಿದೆ. ಅವರು ಜೈಲಿನಲ್ಲಿ ಉತ್ತಮ ನಡತೆ ಪ್ರದರ್ಶಿಸಿದ್ದಾರೆ. ಅಷ್ಟಕ್ಕೂ, ಬ್ರಾಹ್ಮಣರನ್ನು ಸಿಲುಕಿಸಲು ಪಿತೂರಿ ನಡೆದಿರುವ ಸಾಧ್ಯತೆ ಇದೆ’ ಎಂದು ಚಂದ್ರಸಿಂಗ್ ರೌಲ್‌ಜಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದಾದ ಬಳಿಕ ಜನರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು.