ನವದೆಹಲಿ: ತಮ್ಮ ಕ್ಷಮಾದಾನ ರದ್ದು ಮಾಡಿದ ಜನವರಿ 8ರ ತೀರ್ಪನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಅರ್ಜಿಯು ಸಂಪೂರ್ಣ ದುರುದ್ದೇಶದಿಂದ ಕೂಡಿದೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರ ಪೀಠವು ಹೇಳಿತು.
‘ಸಂವಿಧಾನದ ಪರಿಚ್ಛೇದ 32ರಡಿ ಈ ಅರ್ಜಿ ಸಲ್ಲಿಸಲು ಹೇಗೆ ಸಾಧ್ಯ? ಇನ್ನೊಂದು ಪೀಠ ನೀಡಿದ ತೀರ್ಪಿನ ವಿರುದ್ಧ ನೀಡಲಾದ ಮೇಲ್ಮನವಿಯನ್ನು ನಾವು ಆಲಿಸಲು ಸಾಧ್ಯವಿಲ್ಲ’ ಎಂದು ನುಡಿದಿದೆ.
ಅಪರಾಧಿಗಳಾದ ರಾಧೇಶ್ಯಾಮ್ ಭಗವಾನದಾಸ ಶಾ ಮತ್ತು ರಾಜುಭಾಯ್ ಬಾಬುಲಾಲ್ ಸೋನಿ ಪರ ವಕೀಲ ರಿಷಿ ಮಲ್ಹೋತ್ರಾ ಅವರು, ಅರ್ಜಿಯನ್ನು ಹಿಂಪಡೆಯಲು ಅವಕಾಶ ನೀಡಿ ಎಂದು ಅನುಮತಿ ಕೋರಿದರು.
2002ರಲ್ಲಿ ಗುಜರಾತ್ ನಲ್ಲಿ ಸ್ಫೋಟಗೊಂಡಿದ್ದ ಗುಜರಾತ್ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರವೆಸಗಿ, ಆಕೆಯ ಕುಟುಂಬದ ಸದಸ್ಯರನ್ನು ಹತ್ಯೆಗೈದ ಆರೋಪದಲ್ಲಿ ಭಗವಾನ್ದಾಸ್ ಮತ್ತು ಬಾಬುಲಾಲ್ ನನ್ನು ಅಪರಾಧಿಗಳೆಂದು ನ್ಯಾಯಾಲಯ ತೀರ್ಪು ನೀಡಿತ್ತು. ಇದಾದ ನಂತರ 2022ರ ಸ್ವಾತಂತ್ರ್ಯ ದಿನಾಚರಣೆಯಂದು ಈ ಇಬ್ಬರು ದೋಷಿಗಳಿಗೆ ಕ್ಷಮಾದಾನ ನೀಡಿ ಗುಜರಾತ್ ಸರಕಾರ ಬಿಡುಗಡೆಗೊಳಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.