ನವದೆಹಲಿ: ಬಿಲ್ಕಿಸ್ ಬಾನು ಅವರ ಸಾಮೂಹಿಕ ಅತ್ಯಾಚಾರ ಮತ್ತು ಅವರ ಕುಟುಂಬದ ಏಳು ಸದಸ್ಯರ ಹತ್ಯೆ ಪ್ರಕರಣದಲ್ಲಿ 2008 ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ಅಪರಾಧಿಗಳನ್ನು ಅವಧಿ ಪೂರ್ವ ಬಿಡುಗಡೆ ಮಾಡಲು ವಿಶೇಷ ನ್ಯಾಯಾಧೀಶರು ಮತ್ತು ಪ್ರಾಸಿಕ್ಯೂಟಿಂಗ್ ಏಜೆನ್ಸಿಯಾದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ –ಸಿಬಿಐ ವಿರೋಧಿಸಿದ್ದರೂ, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ಎ) ಅನುಮೋದನೆ ನೀಡಿತ್ತು ಎಂದು ಗುಜರಾತ್ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡವಿತ್ ನಲ್ಲಿ ತಿಳಿಸಿದೆ.
ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಮೂರು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ನಡೆಸಲಿದೆ.
ಮಾರ್ಚ್ 2021 ರಲ್ಲಿ, ವಿಶೇಷ ನ್ಯಾಯಾಧೀಶ ಆನಂದ್ ಎಲ್ ಯವಾಲ್ಕರ್ ಅವರು ಗೋಧ್ರಾ ಉಪ ಕಾರಾಗೃಹದ ಅಧೀಕ್ಷಕರಿಗೆ “ಅವಧಿ ಪೂರ್ವ ಬಿಡುಗಡೆ (ಅಪರಾಧಿಗಳ) ಬಗ್ಗೆ ಸಾಮಾನ್ಯ ಅಭಿಪ್ರಾಯ” ದ ಬಗ್ಗೆ ಪತ್ರ ಬರೆದಿದ್ದಾರೆ ಎಂದು ದಾಖಲೆಗಳು ಬಹಿರಂಗಪಡಿಸಿವೆ.
ಪತ್ರದಲ್ಲಿ, ಈ ಪ್ರಕರಣದಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಎಲ್ಲಾ ಅಪರಾಧಿಗಳು ತಪ್ಪಿತಸ್ಥರೆಂದು ಕಂಡುಬಂದಿದೆ. ಅಪರಾಧಿಗಳು ಸಂತ್ರಸ್ತರೊಂದಿಗೆ ಯಾವುದೇ ದ್ವೇಷ ಅಥವಾ ಯಾವುದೇ ಸಂಬಂಧವನ್ನು ಹೊಂದಿರಲಿಲ್ಲ. ಅವರು ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದವರು ಎಂಬ ಆಧಾರದ ಮೇಲೆ ಮಾತ್ರ ಅಪರಾಧವೆಸಗಲಾಗಿದೆ. ಈ ಸಂದರ್ಭದಲ್ಲಿ ಅಪ್ರಾಪ್ತ ಮಕ್ಕಳು ಮತ್ತು ಗರ್ಭಿಣಿಯರನ್ನು ಸಹ ಬಿಡಲಿಲ್ಲ. ಇದು ದ್ವೇಷದ ಅಪರಾಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧದ ಅತ್ಯಂತ ಕೆಟ್ಟ ರೂಪವಾಗಿದೆ. ಇದು ಸಮಾಜದ ಪ್ರಜ್ಞೆಯ ಮೇಲೆ ಪರಿಣಾಮ ಬೀರುತ್ತದೆ, ಒಂದು ಪ್ರಕರಣವು ಅನೇಕ ವರ್ಗಗಳ ಅಡಿಯಲ್ಲಿ ಬಂದಾಗ, ಗರಿಷ್ಠ ಸೆರೆವಾಸವನ್ನು ಪರಿಗಣಿಸಬೇಕು ಎಂದು ನ್ಯಾಯಾಧೀಶರು ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಇದಲ್ಲದೆ ಆರೋಪಿಗಳು ಮಾಡಿದ ಅಪರಾಧವು “ಘೋರ ಮತ್ತು ಗಂಭೀರ” ಮತ್ತು ಆದ್ದರಿಂದ “ಅವರನ್ನು ಅವಧಿ ಪೂರ್ವವಾಗಿ ಬಿಡುಗಡೆ ಮಾಡಲು ಸಾಧ್ಯವಿಲ್ಲ ಮತ್ತು ಅವರಿಗೆ ಯಾವುದೇ ಕರುಣೆಯನ್ನು ನೀಡಲು ಸಾಧ್ಯವಿಲ್ಲ” ಎಂದು ಸಿಬಿಐ ಹೇಳಿದೆ ಎಂದು ಬಹಿರಂಗವಾಗಿದೆ.
ಆದರೆ ಇಂತಹ ಅಪರಾಧಿಗಳನ್ನು ಬಿಡುಗಡೆ ಮಾಡಲು ಕೇಂದ್ರ ಗೃಹ ಇಲಾಖೆ ಒಪ್ಪಿಗೆ ಸೂಚಿಸಿರುವುದು ಇದೀಗ ಬೆಳಕಿಗೆ ಬಂದಿದೆ.