ಪಾಟ್ನಾ: ಬಿಹಾರದ ಸರನ್ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಸಿ ಸಂಭವಿಸಿದ ಛಾಪ್ರಾ ನಕಲಿ ಮದ್ಯ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 60ಕ್ಕೆ ಏರಿದೆ. ಛಾಪ್ರಾದಲ್ಲಿ ನಡೆದ ದುರಂತದ ಹಿನ್ನೆಲೆಯಲ್ಲಿ, ಮಾರ್ಹೌರಾ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಯೋಗೇಂದ್ರ ಕುಮಾರ್ ಅವರ ಶಿಫಾರಸಿನ ಮೇರೆಗೆ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ರಿತೇಶ್ ಮಿಶ್ರಾ ಮತ್ತು ಕಾನ್ಸ್ಟೇಬಲ್ ವಿಕೇಶ್ ತಿವಾರಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ಬಿಹಾರದಲ್ಲಿ 2016ರ ಏಪ್ರಿಲ್ ನಲ್ಲಿ ನಿತೀಶ್ ಕುಮಾರ್ ಸರ್ಕಾರ ಮದ್ಯ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿತ್ತು. ಬಿಜೆಪಿ ಸಂಸದ ಸುಶೀಲ್ ಮೋದಿ ಬಿಹಾರ ವಿಧಾನಸಭೆಯಲ್ಲಿ ತಮ್ಮ ‘ಶರಾಬಿ’ ಹೇಳಿಕೆಗೆ ಸಂಬಂಧಿಸಿದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ನಿತೀಶ್ ಕುಮಾರ್ ಅವರ ಮಾಜಿ ಮಿತ್ರ ಪಕ್ಷವಾದ ಬಿಜೆಪಿ ನಾಯಕರು, ರಾಜ್ಯಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ, ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು. ಬಿಜೆಪಿ ಆರೋಪಕ್ಕೆ ಉತ್ತರಿಸಿದ ನಿತೀಶ್ ಕುಮಾರ್ ಅವರು, ಯಾರೆಲ್ಲಾ ನಕಲಿ ಮದ್ಯ ಸೇವಿಸ್ತಾರೋ ಅವರೆಲ್ಲಾ ಸಾಯೋದು ಖಂಡಿತ. ಖುದ್ದು ಜನರೇ ಈ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಕೆಲವೊಂದು ವ್ಯಕ್ತಿಗಳು ದುಡ್ಡಿಗಾಗಿ ಈ ಕೆಲಸ ಮಾಡುತ್ತಾರೆ ಎಂದ್ದಿದ್ದಾರೆ.