ಪಾಟ್ನಾ: ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಹಾರ ಸಚಿವ ಕಾರ್ತಿಕೇಯ ಸಿಂಗ್ ಅವರ ರಾಜೀನಾಮೆಯನ್ನು ಬಿಹಾರದ ರಾಜ್ಯಪಾಲ ಫಗು ಚೌಹಾಣ್ ಬುಧವಾರ ಬೆಳಿಗ್ಗೆ ಅಂಗೀಕರಿಸಿದ್ದಾರೆ.
2014ರ ಅಪಹರಣ ಪ್ರಕರಣದಲ್ಲಿ ಸಿಂಗ್ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಲಾಗಿತ್ತು. ಆದರೆ ಅವರಿಗೆ ದಾನಾಪುರ ನ್ಯಾಯಾಲಯವು ಸೆಪ್ಟೆಂಬರ್ 1 ರವರೆಗೆ ಮಧ್ಯಂತರ ರಕ್ಷಣೆ ನೀಡಿತ್ತು.
ಇದಕ್ಕೂ ಮುನ್ನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ರಾಜೀನಾಮೆಯನ್ನು ಅಂಗೀಕರಿಸಿ ರಾಜ್ಯಪಾಲ ಫಗು ಚೌಹಾಣ್ ಅವರಿಗೆ ಕಳುಹಿಸಿದ್ದರು ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.
ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ ಹೊಸ ಸರಕಾರವನ್ನು ರಚಿಸಿದ ನಂತರ ಕಾರ್ತಿಕ್ ಕುಮಾರ್ ಅವರನ್ನು ಕಾನೂನು ಸಚಿವರನ್ನಾಗಿ ಮಾಡಲಾಗಿತ್ತು. ಕಾರ್ತಿಕ್ ಕುಮಾರ್ ಅವರನ್ನು ಸಚಿವರನ್ನಾಗಿ ನೇಮಿಸಿದಾಗ ಬಿಜೆಪಿ ನಿತೀಶ್ ಕುಮಾರ್ ಸರಕಾರವನ್ನು ತೀವ್ರವಾಗಿ ಟೀಕಿಸಿತ್ತು.