ವೇತನ ಕೇಳಿದ ದಲಿತನನ್ನು ಹೊಡೆದು ಕೊಂದ ದುಷ್ಕರ್ಮಿಗಳು : ಸಂತ್ರಸ್ತನ ಶವ ನದಿಯಲ್ಲಿ ಪತ್ತೆ

Prasthutha|

ಪಾಟ್ನಾ: ದಿನಗೂಲಿ ನೌಕರನಾಗಿ ಹೊಲದಲ್ಲಿ ದುಡಿಯುತ್ತಿದ್ದ ದಲಿತ ಯುವಕನೊಬ್ಬನನ್ನು ವೇತನಕ್ಕೆ ಬೇಡಿಕೆಯಿಟ್ಟ ನೆಪವೊಡ್ಡಿ ಹೊಡೆದು ಕೊಲೆ ಮಾಡಿರುವ ಘಟನೆ ಬಿಹಾರದಿಂದ ವರದಿಯಾಗಿದೆ. ಭಾನುವಾರ ಆತನನ್ನು ಕೊಂದ ನಂತರ ಆತನ ದೇಹಕ್ಕೆ ಇಟ್ಟಿಗೆಗಳನ್ನು ಕಟ್ಟಿ ನದಿಗೆ ಎಸೆಯಲಾಗಿತ್ತು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸ್ವಗ್ರಾಮದಲ್ಲಿ ಈ ಕುಕೃತ್ಯ ನಡೆದಿರುವುದು ಗಮನಾರ್ಹವಾಗಿದೆ.

ಪಾಟ್ನಾ ಜಿಲ್ಲೆಯ ಕುಂಡಲಿ ಗ್ರಾಮದ ಉಪೇಂದ್ರ ರವಿದಾಸ್ (25) ಎಂಬ ಸಂತ್ರಸ್ತ ಯುವಕ ಭಾನುವಾರ ಸಂಜೆಯಿಂದ ಕಾಣೆಯಾಗಿದ್ದರು. ಬಹದ್ದೂರುಪುರದಿಂದ 25 ಕಿ.ಮೀ ದೂರದ ನದಿಯಿಂದ ಸೋಮವಾರ ಆತನ ಮೃತ ಶರೀರವನ್ನು ಪತ್ತೆಹಚ್ಚಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಈ ಪ್ರಕರಣದ ಪ್ರಮುಖ ಆರೋಪಿ ನಳಂದದ ಬಹದ್ದೂರ್ ಪುರದ ದಿನೇಶ್ ಮಹತೋ ಎಂಬಾತ ತಲೆಮರೆಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಉಪೇಂದ್ರ ಮತ್ತು ಆತನ ಸೋದರ ಮಾವ ಸಿಕಂದರ್ ರವಿದಾಸ್ ಸುಮಾರು 15 ದಿನಗಳ ಹಿಂದೆ ಮಹತೋ ಅವರ ಹೊಲದಲ್ಲಿ ಒಂದು ದಿನ ಭತ್ತ ಬಿತ್ತನೆ ಕೆಲಸ ಮಾಡುತ್ತಿದ್ದರು. ಸಿಕಂದರ್ ಅವರು 10 ಕೆ.ಜಿ ಅಕ್ಕಿಯ ಮೊತ್ತವನ್ನು ಪಾವತಿಸುವಂತೆ ಮಹತೋ ಅವರ ಬಳಿಯಲ್ಲಿ ವಿನಂತಿಸಿದಾಗ ಕೆಲವು ದಿನಗಳ ನಂತರ ಬರುವಂತೆ ಮಹತೋ ಸೂಚಿಸಿದ್ದಾರೆಂದು ಸಿಕಂದರ್ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಬಹದ್ದೂರ್ ಪುರಕ್ಕೆ ಹೋಗಿ ಮಹತೋ ಅವರಲ್ಲಿ ತಮ್ಮ ವೇತನವನ್ನು ಇತ್ಯರ್ಥಪಡಿಸುವಂತೆ ವಿನಂತಿಸಿದರು. ಈ ಸಂದರ್ಭದಲ್ಲಿ ಮಹತೋ ಮತ್ತು ಸಂಗಡಿಗರು ಇಬ್ಬರನ್ನು ನಿಂದಿಸಲು ಆರಂಭಿಸಿದರು. ಇದಕ್ಕೆ ಆಕ್ಷೇಪಿಸಿದಾಗ ದೊಣ್ಣೆಗಳಿಂದ ಹಲ್ಲೆ ನಡೆಸಿದರೆಂದು ಪೊಲೀಸರು ತಿಳಿಸಿದ್ದಾರೆ. ಈ ಸಮಯದಲ್ಲಿ ಸಿಕಂದರ್ ದುಷ್ಕರ್ಮಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ದುರದೃಷ್ಟವಶಾತ್ ಉಪೇಂದ್ರ ಅವರು ತಪ್ಪಿಸುವಲ್ಲಿ ವಿಫಲರಾಗಿದ್ದರು. ಪೊಲೀಸರು ಈ ಸಂಬಂಧ ಉಪೇಂದ್ರ ಅವರನ್ನು ತೀವ್ರವಾಗಿ ಹುಡುಕಾಡಿದರು ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ಅವರ ಮೃತದೇಹವು ಬಹದ್ದೂರ್ ಪುರದ ಹೊರವಲಯದ ನದಿಯಲ್ಲಿ ಪತ್ತೆಹಚ್ಚಲಾಗಿದೆಯೆಂದು ಸಾರ್ವಜನಿಕರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಅವರ ಮೃತದೇಹವು ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾತ್ರವಲ್ಲದೆ ಆತನ ದೇಹ ನದಿಯಿಂದ ಮೇಲೇರದಂತೆ ಮಾಡಲು ಇಟ್ಟಿಗೆಯನ್ನು ಕಟ್ಟಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಈ ಸಂಬಂಧ ಎಫ್.ಐ.ಆರ್ ದಾಖಲಿಸಿ ಮೂವರನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

- Advertisement -