ತಂದೆ ಸತ್ತ ಬೆನ್ನಿಗೇ ತಾಯಿಯೂ ಕೋವಿಡ್​ಗೆ ಬಲಿ | ಅಂತ್ಯಸಂಸ್ಕಾರಕ್ಕೆ ಹಣ ಇಲ್ಲದೆ ಗುಂಡಿ ಅಗೆದು ಕಾರ್ಯ ಮುಗಿಸಿದ ಪುಟ್ಟ ಮಗಳು!

Prasthutha|

ಬಿಹಾರ: ಕೊರೋನಾ ಸೋಂಕಿನ ತೀವ್ರತೆಯಿಂದ ಅಪಾರ ಸಾವು ನೋವುಗಳು ಸಂಭವಿಸುತ್ತಿದ್ದು, ಹಲವಾರು ಮಂದಿ ತಮ್ಮ ಪ್ರೀತಿ ಪಾತ್ರರನ್ನು ಕಳೆದು ಕೊಂಡಿದ್ದಾರೆ. ಈ ನಡುವೆ ಕರೊನಾ ಸೋಂಕಿಗೆ ತುತ್ತಾಗಿದ್ದ ಬೀರೇಂದ್ರ ಮೆಹ್ತಾ ಎಂಬವರು ಮೃತಪಟ್ಟಿದ್ದು, ಇದರ ಬೆನ್ನಿಗೇ ಕೊರೋನಾ ಸೋಂಕು ತಗುಲಿ ಸಾವನ್ನಪ್ಪಿದ ಮೆಹ್ತಾ ಅವರ ಪತ್ನಿ ಪ್ರಿಯಾಂಕಾ ದೇವಿಯ ಮೃತದೇಹವನ್ನು ಅಂತಿಮ ವಿಧಿ ವಿಧಾನ ನಡೆಸಲು ಹಣವಿಲ್ಲದೆ ಅವರ ಪುಟ್ಟ ಮಗಳೊಬ್ಬಳು ತಾನೇ ಗುಂಡಿ ತೋಡಿ ಅಂತ್ಯಸಂಸ್ಕಾರ ನಡೆಸಿದ ದಾರುಣ ಘಟನೆ ಬಿಹಾರ ರಾಜ್ಯದ ಅರೇರಿಯಾ ಜಿಲ್ಲೆಯಲ್ಲಿ ನಡೆದಿದೆ.

- Advertisement -

ರಾಣಿಗಂಜ್​ನ ಬಿಶಾನ್ಪುರ್​​ ನಿವಾಸಿಗಳಾದ ಬೀರೇಂದ್ರ ಮೆಹ್ತಾ(40) ಹಾಗೂ ಪ್ರಿಯಾಂಕಾ ದೇವಿ(32) ದಂಪತಿಗೆ ಕೊರೊನಾ ದೃಢಪಟ್ಟಿತ್ತು. ಇವರ ಪ್ರಾಥಮಿಕ ಸಂಪರ್ಕದಲ್ಲಿ ಮೂವರು ಮಕ್ಕಳಿದ್ದರು.

 ತಂದೆ-ತಾಯಿಯನ್ನು ಬದುಕಿಸಿಕೊಳ್ಳಲು ಇವರ ಮೂವರು ಪುಟ್ಟ ಮಕ್ಕಳು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕೇವಲ ನಾಲ್ಕು ದಿನಗಳ ಅಂತರದಲ್ಲಿ ಸೋಂಕಿತ ದಂಪತಿ ಇಬ್ಬರೂ ಸಾವನ್ನಪ್ಪಿದ್ದು, ಅಂತ್ಯಕ್ರಿಯೆಗೆ ಗುಂಡಿ ತೋಡಲು ಹಣ ಇಲ್ಲದೆ ಪರದಾಡಿದ ಮಕ್ಕಳು ಕೊನೆಗೆ ತಾವೇ ಸಮಾಧಿ ಅಗೆದು ತಾಯಿಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

- Advertisement -

ಪ್ರಿಯಾಂಕಾ ದೇವಿಯ ಶವವನ್ನು ಅಂತ್ಯಸಂಸ್ಕಾರ ನಡೆಸಲು ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ಗ್ರಾಮಸ್ಥರು ಕರೊನಾ ಸೋಂಕಿನ ಭೀತಿಯಲ್ಲಿ ಅಮಾನವೀಯವಾಗಿ ವರ್ತಿಸಿದ್ದು, ಇತ್ತ ತಾಯಿಯ ಅಂತ್ಯಸಂಸ್ಕಾರಕ್ಕೆ ಗುಂಡಿ ತೋಡಿಸಲು ಮೃತರ ಮಕ್ಕಳ ಬಳಿ ಹಣವೂ ಇರಲಿಲ್ಲ. ಕೊನೆಗೆ ಮೃತರ ಹಿರಿಯ ಪುತ್ರಿ ಸೋನಿ ಕುಮಾರಿ ಪಿಪಿಇ ಕಿಟ್ ಧರಿಸಿ ಸ್ವತಃ ಗುಂಡಿ ತೋಡಿದ್ದಾಳೆ. ಬಳಿಕ ಮೂರು ಮಕ್ಕಳು ಜತೆಯಾಗಿ ತಾಯಿಯ ಶವವನ್ನು ಸಮಾಧಿಯಲ್ಲಿ ಮುಚ್ಚಿ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ.

Join Whatsapp