ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಗೆ ಹೋಗಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.
ಬಳ್ಳಾರಿಗೆ ಹೋಗುವುದಾದರೆ ಮೊದಲೇ ಅಲ್ಲಿನ ಎಸ್ ಪಿಗೆ ಮಾಹಿತಿ ನೀಡಬೇಕು. ಹಾಗೆಯೇ ಅಲ್ಲಿಂದ ವಾಪಸ್ ಬರುವಾಗಲೂ ಕೂಡ ಎಸ್ ಪಿಗೆ ತಿಳಿಸಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ. ಈ ಮೂಲಕ ರೆಡ್ಡಿ ಅವರಿಗೆ ಈ ಮೊದಲು ವಿಧಿಸಿದ್ದ ಜಾಮೀನು ಷರತ್ತುಗಳನ್ನು ಸುಪ್ರೀಂಕೋರ್ಟ್ ಸಡಿಲಗೊಳಿಸಿದೆ.
ಜಾಮೀನು ಷರತ್ತುಗಳನ್ನು ಸಡಿಲಗೊಳಿಸುವಂತೆ ಕೋರಿ ಸುಪ್ರೀಂಗೆ ಅವರು ಅರ್ಜಿ ಸಲ್ಲಿಸಿದ್ದರು. ಈ ತಿಂಗಳ 13 ರಂದು ಈ ಸಂಬಂಧ ವಿಚಾರಣೆ ನಡೆಸಲಾಗಿತ್ತು. ಆ ವೇಳೆ ಸಿಬಿಐ, ಯಾವುದೇ ಕಾರಣಕ್ಕೂ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಗೆ ಭೇಟಿ ನೀಡಲು ಅವಕಾಶ ಕೊಡಬಾರದೆಂದು ವಾದಿಸಿತ್ತು. ಒಂದು ವೇಳೆ ಜನಾರ್ದನ ರೆಡ್ಡಿಗೆ ಬಳ್ಳಾರಿ ಪ್ರವೇಶಕ್ಕೆ ಅನುಮತಿ ಕೊಟ್ಟರೆ ಸಾಕ್ಷ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಅಲ್ಲದೆ, ಸಾಕ್ಷಿದಾರರಿಗೂ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಸುಪ್ರೀಂಕೋರ್ಟ್ಗೆ ಸಿಬಿಐ ತಿಳಿಸಿತ್ತು.