ಬೆಂಗಳೂರು: ಪದವಿ, ಇಂಜನಿಯರಿಂಗ್, ಡಿಪ್ಲೊಮಾ ಹಾಗೂ ವೃತ್ತಿಪರ ಕೋರ್ಸ್ಗಳನ್ನು ಪೂರ್ಣಗೊಳಿಸಿರುವವರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಬೃಹತ್ ಉದ್ಯೋಗ ಮೇಳ ಇದೇ ತಿಂಗಳ 26 ಮತ್ತು 27 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.
ವಿಧಾನಸೌಧದ ಸಮ್ಮೇಳನದ ಸಭಾಂಗಣದಲ್ಲಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹಾಗೂ ಐಟಿ- ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಜೊತೆಯಾಗಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ,ಈಗಾಗಲೇ ಈ ಮೇಳಕ್ಕೆ ರಾಜ್ಯಾದ್ಯಂತ ಒಟ್ಟು 31 ಸಾವಿರ ಅರ್ಹ ಅಭ್ಯರ್ಥಿಗಳು ಆನ್ಲೈನ್ ರಿಜಿಸ್ಟರ್ ಮೂಲಕ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಉದ್ಯೋಗ ಮೇಳದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಹೆಸರಾಂತ 500ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಲಿವೆ. ಅಂದಾಜು ಒಂದು ಲಕ್ಷ ಹುದ್ದೆಗಳು ನಮ್ಮ ಬಳಿ ಲಭ್ಯವಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಉದ್ಯೋಗಗಳನ್ನು ಒದಗಿಸಿಕೊಡಲು ಇದು ವೇದಿಕೆಯಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಚಿವರು ಮನವಿ ಮಾಡಿದರು.
ಪ್ರಿಯಾಂಕ್ ಖರ್ಗೆ ಮಾತನಾಡಿ, ದೇಶದಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಮೇಳ ನಡೆದಿದ್ದರೆ ಅದು ನಮ್ಮ ಸರ್ಕಾರದಿಂದ ಮಾತ್ರ. ಇಲ್ಲಿರುವ ಮಾನವ ಸಂಪನ್ಮೂಲ, ಮೂಲ ಸೌಕರ್ಯಗಳು ಸೇರಿದಂತೆ ಹಲವಾರು ಕಾರಣಗಳಿಂದ ದೊಡ್ಡ ದೊಡ್ಡ ಕಂಪನಿಗಳು ಮುಂದೆ ಬಂದಿವೆ. ಯುವಜನತೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ನಾವು ಕೇವಲ ಉದ್ಯೋಗ ಮಾತ್ರ ಕೊಡುತ್ತಿಲ್ಲ. ಅವರ ಸ್ಕಿಲ್ ಗ್ಯಾಪ್ಗಳನ್ನು ಸರಿಮಾಡಲು ನಾವು ಸೆಂಟರ್ ಗಳನ್ನು ಮಾಡಿಕೊಂಡಿದ್ದೇವೆ. ಇಲ್ಲಿ ನೋಂದಣಿ ಮಾಡಿಕೊಂಡವರನ್ನು ಟ್ರ್ಯಾಕ್ ಮಾಡಿ ಉದ್ಯೋಗ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದ್ದು, ಪ್ರಧಾನಿ ಮಂತ್ರಿಗಳು 20 ಕೋಟಿ ಉದ್ಯೋಗ ಕೊಡುತ್ತೇವೆ ಎಂದಿದ್ದರು. ಯಾವ ಉದ್ಯೋಗವನ್ನೂ ನೀಡಿಲ್ಲ. ಸುಮಾರು 40 ಸಾವಿರ ಉದ್ಯೋಗಗಳನ್ನು ನಾವು ಕಳೆದುಕೊಂಡಿದ್ದೇವೆ. ಎನ್ಎಸ್ ಓ ಸರ್ವೆ ಗಳಿಂದ ಬಂದಿರುವ ಮಾಹಿತಿ ಇದು. ಈ ವರದಿ ಬಂದ ಮೇಲೆ ಎನ್ಎಸ್ಓ ಸರ್ವೆಗಳು ನಿಲ್ಲಿಸಿಬಿಟ್ಟರು. ಯುಪಿಎ ಸರ್ಕಾರ 10 ಸಾವಿರ ಐಟಿಗಳನ್ನು ಸ್ಥಾಪನೆ ಮಾಡಿತ್ತು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಯುವ ಸಮೃದ್ದಿ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಸಮ್ಮೇಳನಕ್ಕೆ ಬರುವವರಿಗೆ ಉಚಿತ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಉದ್ಯೋಗ ಮೇಳಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಬರುವ ಅಭ್ಯರ್ಥಿಗಳಿಗೆ ಅನುಕೂಲ ಕಲ್ಪಿಸಲು ಮೆಜೆಸ್ಟಿಕ್ ರೈಲ್ವೆ ಹಾಗು
ಬಸ್ ನಿಲ್ದಾಣಗಳಿಂದ ಮತ್ತು ಶಾಂತಿ ನಗರ ಬಸ್ ನಿಲ್ದಾಣದಿಂದ ಉಚಿತ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಉದ್ಯೋಗ ಮೇಳಕ್ಕಾಗಿ ವಿಶೇಷ ಬಸ್ಗಳು ಬರಲಿವೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿದೇರ್ಶಕಿ ಎಂ. ಕನಗವಳ್ಳಿ ಉಪಸ್ಥಿತರಿದ್ದರು.