ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಖ್ಯಾತ ವಕೀಲ ಸಲ್ಮಾನ್ ಖುರ್ಷಿದ್ ಇಂಡಿಯಾ ಇಸ್ಲಾಮಿಕ್ ಕಲ್ಚರ್ ಸೆಂಟರ್ (IICC) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಐಐಸಿಸಿಯ ಆಡಳಿತ ಮಂಡಳಿಯಲ್ಲಿ ತನ್ನ ಅಸ್ತಿತ್ವವನ್ನು ಸಾಧಿಸಲು ಯತ್ನಿಸುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕದ ಅಂಗ ಸಂಸ್ಥೆ ಎಂಆರ್‌ಎಂಗೆ ಭಾರೀ ನಿರಾಸೆಯಾಗಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಈ ಚುನಾವಣೆಯಲ್ಲಿ ಖುರ್ಷಿದ್ 721 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಖುರ್ಷಿದ್ ಅವರ ಹತ್ತಿರದ ಪ್ರತಿಸ್ಪರ್ಧಿ ಉದ್ಯಮಿ ಆಸಿಫ್ ಹಬೀಬ್ 278 ಮತಗಳನ್ನು ಪಡೆದಿದ್ದಾರೆ.
RSS ಬೆಂಬಲಿತ ಮುಸ್ಲಿಂ ರಾಷ್ಟ್ರೀಯ ಮಂಚ್‌ನ ರಾಷ್ಟ್ರೀಯ ಸಂಚಾಲಕ ಮತ್ತು ಆಂಕೊಲಾಜಿಸ್ಟ್ ಡಾ. ಮಜೀದ್ ಅಹ್ಮದ್ ತಾಳಿಕೋಟಿ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವಿನ ನಂಬಿಕೆಯಲ್ಲಿದ್ದರು. ಮಜೀದ್ ಅಹ್ಮದ್ ಗೆ ಐಐಸಿಸಿ ಮಾಜಿ ಅಧ್ಯಕ್ಷ ಸಿರಾಜುದ್ದೀನ್ ಖುರೇಷಿಯ ಬೆಂಬಲ ಕೂಡ ಇತ್ತು. ಆದರೂ, ತಾಳಿಕೋಟಿ ಕೇವಲ 227 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಐಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ನನಗೆ ಅತೀವ ಗೌರವವಾಗಿದೆ. ನಿಮ್ಮ ವಿಶ್ವಾಸ ಮತ್ತು ಬೆಂಬಲಕ್ಕಾಗಿ ಎಲ್ಲಾ ಸದಸ್ಯರಿಗೆ ಧನ್ಯವಾದಗಳು. ಎಲ್ಲಾ ಚುನಾಯಿತ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಒಟ್ಟಾಗಿ, ನಾವು ಐಐಸಿಸಿಯ ಮೌಲ್ಯಗಳ ಸುಧಾರಣೆ ಮತ್ತು ಸಂರಕ್ಷಣೆಗಾಗಿ ಕೆಲಸ ಮಾಡುತ್ತೇವೆ ಎಂದು ಖುರ್ಷಿದ್ ಗೆಲುವಿನ ನಂತರ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎಂಡಿ ಫುರ್ಕನ್ ಖುರೇಷಿ 362 ಮತಗಳಿಂದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.