ಮಧ್ಯಪ್ರದೇಶ ಬಿಜೆಪಿಗೆ ದೊಡ್ಡ ಹೊಡೆತ: ರುಸ್ತಮ್ ಸಿಂಗ್ ರಾಜೀನಾಮೆ

Prasthutha|

ಭೋಪಾಲ್: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಗೆ ದೊಡ್ಡ ಹೊಡೆತ ಸಿಕ್ಕಿದೆ. ಮಾಜಿ ಸಚಿವ,ಹಿರಿಯ ಬಿಜೆಪಿ ನಾಯಕ ರುಸ್ತಮ್ ಸಿಂಗ್ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ವಿಷ್ಣು ದತ್ ಶರ್ಮಾ ಅವರಿಗೆ ಪತ್ರದ ಮೂಲಕ ರಾಜೀನಾಮೆ ಬಗ್ಗೆ ತಿಳಿಸಿದ್ದಾರೆ. 78 ವರ್ಷದ ರುಸ್ತಮ್ ಸಿಂಗ್ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಮತ್ತು ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

- Advertisement -

ರುಸ್ತಮ್ ಸಿಂಗ್ ಅವರನ್ನು ಪಕ್ಷ ಸರಿಯಾಗಿ ನಡೆಸಿಕೊಳ್ಳಲಿಲ್ಲ, ಈ ಕಾರಣಕ್ಕಾಗಿ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ’ ಎಂದು ರುಸ್ತಮ್ ಸಿಂಗ್ ಅವರ ನಿಕಟರು ಹೇಳಿದ್ದಾರೆ. ಆದರೆ ಬಹುಜನ ಸಮಾಜ ಪಕ್ಷವು ರುಸ್ತಮ್ ಸಿಂಗ್ ಅವರ ಪುತ್ರ ರಾಕೇಶ್ ಸಿಂಗ್ ಅವರಿಗೆ ಮೊರೆನಾ ಕ್ಷೇತ್ರದಿಂದ ಟಿಕೆಟ್ ನೀಡಿದೆ. ಅಂದಿನಿಂದ ರುಸ್ತಮ್ ಸಿಂಗ್ ತನ್ನ ಮಗನ ಪರ ಪ್ರಚಾರ ಮಾಡಲು ಆಡಳಿತಾರೂಢ ಬಿಜೆಪಿಯನ್ನು ತೊರೆಯಬಹುದು ಎಂಬ ಊಹಾಪೋಹ ಇತ್ತು.

ಗ್ವಾಲಿಯರ್-ಚಂಬಲ್ ಪ್ರದೇಶದ ಪ್ರಭಾವಿ ಗುರ್ಜರ್ ನಾಯಕರಾದ ರುಸ್ತಮ್ ಸಿಂಗ್ 2003 ರಲ್ಲಿ ಭಾರತೀಯ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿ ಬಿಜೆಪಿ‌ ಸೇರಿದ್ದರು. 2003 ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆದ್ದಿದ್ದರು. ಇದಾದ ಬಳಿಕ 2013ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದರು. ರುಸ್ತಮ್ ಸಿಂಗ್ ಅವರನ್ನು ಮಧ್ಯಪ್ರದೇಶ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಲಾಗಿತ್ತು.

- Advertisement -

230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 17 ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.

Join Whatsapp