ನವದೆಹಲಿ : ಅಮೆರಿಕದ ಅಧ್ಯಕ್ಷೀಯ ಚುನಾವಣೆ ಗೆಲ್ಲುವಲ್ಲಿ ತಂತ್ರಗಾರಿಕೆ ರೂಪಿಸಿದ್ದ ತಂಡಗಳಲ್ಲಿದ್ದ ಸುಮಾರು 20ರಷ್ಟು ಭಾರತೀಯ ಮೂಲದ ಅಮೆರಿಕನ್ನರನ್ನು ನೂತನ ಅಧ್ಯಕ್ಷ ಜೋ ಬೈಡನ್ ತಮ್ಮ ಆಡಳಿತ ತಂಡಕ್ಕೂ ಸೇರಿಸಿಕೊಂಡಿದ್ದಾರೆ. ಇದು ಭಾರತೀಯರಲ್ಲೂ ದೊಡ್ಡ ಸಂಚಲನವನ್ನೇ ಮೂಡಿಸಿದೆ. ಆದರೆ, ಒಬಾಮಾ ಆಡಳಿತದಲ್ಲಿದ್ದ ಮತ್ತು ಬೈಡನ್ ಪ್ರಚಾರದಲ್ಲೂ ಸಕ್ರಿಯರಾಗಿದ್ದ, ತಮ್ಮದೇ ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರಾದ ಸೋನಾಲ್ ಶಾ ಮತ್ತು ಅಮಿತ್ ಜಾನಿ ಅವರನ್ನು ಈ ಬಾರಿ ಇಲ್ಲಿ ವರೆಗೂ ಬೈಡನ್ ತಂಡ ಸೇರ್ಪಡೆಗೊಳಿಸಿಲ್ಲ.
ಸೋನಾಲ್ ಶಾ ಮತ್ತು ಅಮಿತ್ ಜಾನಿ ಅವರಿಗೆ ಆರೆಸ್ಸೆಸ್/ಬಿಜೆಪಿ ನಂಟಿರುವುದಕ್ಕೆ ಅವರನ್ನು ಬೈಡನ್ ತಂಡ ಸೇರಿಸಿಕೊಂಡಿಲ್ಲ ಎಂದು ವರದಿಗಳು ತಿಳಿಸಿವೆ. ಹತ್ತಾರು ಭಾರತೀಯ-ಅಮೆರಿಕನ್ ಸಂಸ್ಥೆಗಳು ಇವರಿಬ್ಬರ ಆರೆಸ್ಸೆಸ್/ಬಿಜೆಪಿ ನಂಟಿನ ಬಗ್ಗೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಇವರನ್ನು ಹೊರಗಿಡಲಾಗಿದೆ ಎಂದು ವರದಿಗಳಾಗಿವೆ.
ದೇವಯಾನಿ ಖೋಬ್ರಗಡೆ ಪ್ರಕರಣ ಮತ್ತು ಕಾಶ್ಮೀರ ಲಾಕ್ ಡೌನ್ ಮತ್ತು ಸಿಎಎ, ಎನ್ ಆರ್ ಸಿ ವಿರುದ್ಧ ಅಮೆರಿಕದಲ್ಲಿ ಪ್ರತಿಭಟನೆ ನಡೆಸಿದ್ಧ ಸಮೀರಾ ಫಝಿಲಿ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉಝ್ರಾ ಝೆಯಾರಂತಹ ಹಿರಿಯ ರಾಯಭಾರಿಗಳು ಬೈಡನ್ ರ ತಂಡದಲ್ಲಿದ್ದಾರೆ. ದೇವಯಾನಿ ಖೋಬ್ರಗಡೆ ದಲಿತ ಸಮುದಾಯಕ್ಕೆ ಸೇರಿದವರು, ಅಮೆರಿಕದಲ್ಲಿ ಭಾರತೀಯ ಐಎಫ್ ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು.
ಜಾತ್ಯತೀತ ಭಾರತೀಯ-ಅಮೆರಿಕನ್ ಸಂಘಟನೆಗಳು ಆರೆಸ್ಸೆಸ್/ಬಿಜೆಪಿ ನಂಟಿನ ಜನರನ್ನು ಬೈಡನ್ ತಂಡದಿಂದ ಹೊರಗಿಡಿಸುವಲ್ಲಿ ಬೈಡನ್-ಕಮಲಾ ಹ್ಯಾರಿಸ್ ಅಧಿಕಾರ ಹಸ್ತಾಂತರ ತಂಡದ ಮೇಲೆ ಒತ್ತಡ ಹೇರಿದ್ದರು ಎನ್ನಲಾಗುತ್ತಿದೆ.
ಸೊನಾಲ್ ಶಾ ಬೈಡನ್ ರ ತಂಡದಲ್ಲಿ ಯೂನಿಟಿ ಟಾಸ್ಕ್ ಫೋರ್ಸ್ ನಲ್ಲಿ ಕಾರ್ಯ ನಿರ್ವಹಿಸಿದ್ದರು. ಆದರೆ, ಅವರ ತಂದೆ ಅಮೆರಿಕದ ಬಿಜೆಪಿಯ ಸಾಗರೋತ್ತರ ಸ್ನೇಹಿತರು ಸಂಘಟನೆಯ ಅಧ್ಯಕ್ಷರಾಗಿದ್ದಾರೆ ಮತ್ತು ಆರೆಸ್ಸೆಸ್ ಬೆಂಬಲಿತ ಏಕಲ್ ವಿದ್ಯಾಲಯದ ಸಂಸ್ಥಾಪಕರು.
ಅಮಿತ್ ಜಾನಿ ಅವರ ಕುಟುಂಬಸ್ಥರೂ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರ ನಂಟು ಹೊಂದಿರುವುದು ಬೆಳಕಿಗೆ ಬಂದಿದೆ.