ಬೀದರ್: ಮನೆಗಳ್ಳತನಕ್ಕೆ ಯತ್ನಿಸುವಾಗ ಸಿಕ್ಕಿಬಿದ್ದು ಧರ್ಮದೇಟು ತಿಂದಿದ್ದ ಕಳ್ಳನೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ.
ನಗರದ ನೌಬಾದ್‌ನ ಸಂತೋಷ ನಾಗೂರೆ (31) ಮೃತ ವ್ಯಕ್ತಿ. ಪರಿಶಿಷ್ಟ ಜಾತಿಗೆ ಸೇರಿರುವ ಸಂತೋಷ ನಾಗೂರೆ ಹಾಗೂ ಆತನ ಮೂವರು ಗೆಳೆಯರಾದ ಸತೀಶ್, ಅಬ್ರಾಹಂ ಹಾಗೂ ಅಂಬರೀಶ್ ಅವರೊಂದಿಗೆ ಗುರುವಾರ ತಡರಾತ್ರಿ ಪ್ರತಾಪ್ ನಗರದಲ್ಲಿ ಮನೆ ಕಳ್ಳತನಕ್ಕೆ ಹೋಗಿದ್ದರು. ಗೋರಖನಾಥ್ ಎಂಬುವರ ಮನೆಯಲ್ಲಿ ಕಳವು ಮಾಡುವಾಗ ಸ್ಥಳೀಯರ ಕೈಗೆ ಸಂತೋಷ್ ಸಿಕ್ಕಿಬಿದ್ದಿದ್ದಾನೆ. ಮೂವರು ಗೆಳೆಯರು ಅಲ್ಲಿಂದ ಓಡಿ ಹೋಗಿದ್ದಾರೆ. ಗೋರಖನಾಥ್ ಮಾಣಿಕರಾವ್ ಸೋಮುರೆ, ಅಶೋಕ್ ಶರಣಪ್ಪ ಮೇತ್ರೆ, ಶ್ರೀನಿವಾಸ್ ಲಾಲಪ್ಪ, ಆಸ್ಟಿನ್ ಹಾಗೂ ಇನ್ನೊಬ್ಬ ವ್ಯಕ್ತಿ ಸೇರಿಕೊಂಡು ಸಂತೋಷ್‌ನಿಗೆ ದೊಣ್ಣೆಗಳಿಂದ ಹೊಡೆದಿದ್ದಾರೆ. ಸಂತೋಷ್‌ನ ತಲೆ, ಕೈಕಾಲು, ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿವೆ ಎಂದು ಎಸ್ಪಿ ಚನ್ನಬಸವಣ್ಣ ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಸಂತೋಷನನ್ನು ಬ್ರಿಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಈ ವೇಳೆ ಆರೋಪಿ ನಾಲ್ವರೊಂದಿಗೆ ಕಳ್ಳತನ ಮಾಡಲು ಬಂದಿರುವ ಬಗ್ಗೆ ಒಪ್ಪಿಕೊಂಡಿದ್ದನು ಎನ್ನಲಾಗಿದೆ.
ಆಸ್ಪತ್ರೆಯಲ್ಲಿ ಸಂತೋಷ ನಾಗೊರೆ ಚಿಕಿತ್ಸೆ ಫಲಕಾರಿಯಾಗದೆ ಸಾಯಂಕಾಲ 5 ಗಂಟೆ ಸುಮಾರಿಗೆ ಮೃತಪಟ್ಟಿದ್ದಾನೆ.
ಸಿಸಿ ಟಿವಿ ದೃಶ್ಯಾವಳಿ ಆಧಾರದ ಮೇಲೆ ಅಕ್ರಮ ಗುಂಪು ಕಟ್ಟಿಕೊಂಡು ಕೊಲೆ ಮಾಡಿರುವ ಕುರಿತು ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಮಾಡುವ ಉದ್ದೇಶದಿಂದಲೇ ನನ್ನ ಕಿರಿಯ ಮಗನನ್ನು ಈ ರೀತಿ ಹೊಡೆದಿದ್ದಾರೆ’ ಎಂದು ಮೃತನ ತಾಯಿ ಕಮಳಮ್ಮ ರಾಮಣ್ಣ ನಾಗೂರೆ ದೂರು ಕೊಟ್ಟಿದ್ದು, ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ನಡೆದ ಸಮೀಪದ ಕಟ್ಟಡವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆಯ ದೃಶ್ಯಾವಳಿ ಸೆರೆಯಾಗಿದ್ದು, ಅವುಗಳನ್ನು ಪರಿಶೀಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.