ಬೀದರ್‌: ಫೋನ್‌ ಪೇ ವೆರಿಫೈ ಹೆಸರಲ್ಲಿ ₹40 ಲಕ್ಷ ರೂ. ವಂಚಿಸಿದ ವ್ಯಕ್ತಿಯ ಬಂಧನ

Prasthutha|

ಬೀದರ್: ಫೋನ್ ಪೇ ವೇರಿಫೈ ಹೆಸರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 79 ಜನರಿಂದ 40 ಲಕ್ಷ ರೂಪಾಯಿ ವಂಚಿಸಿದ ಆರೋಪಿಯನ್ನು ಬೀದ‌ರ್ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಆತನ ಬಳಿಯಿಂದ ಆರು ಮೊಬೈಲ್‌ಗಳು, 45 ಸಿಮ್ ಕಾರ್ಡ್‌ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

- Advertisement -

ಬೀದರ್ ನ ಕೆಎಚ್‌ಬಿ ಕಾಲನಿ ನಿವಾಸಿ ಶಿವಪ್ರಸಾದ ಮಾಡಗಿ ಬಂಧಿತ ವ್ಯಕ್ತಿ. ಜನರಿಂದ ವಂಚಿಸಿದ 40 ಲಕ್ಷ ರೂಪಾಯಿಯನ್ನು ಐಷಾರಾಮಿ ಜೀವನ ನಡೆಸಲು ಖರ್ಚು ಮಾಡಿದ್ದಾನೆ. ಪೊಲೀಸರಿಗೆ 12 ಸಾವಿರವಷ್ಟೇ ಆತನ ಬಳಿಯಿಂದ ದೊರೆತಿದೆ.

ಬಂಧಿತ ಆರೋಪಿ ವಿವಿಧ ಇಲಾಖೆಗಳ ಸರ್ಕಾರಿ ನೌಕರರ ದತ್ತಾಂಶಗಳನ್ನು ಗೂಗಲ್‌ನಲ್ಲಿ ಸರ್ಚ್ ಮಾಡುತ್ತಿದ್ದ. ಅವರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಿ, ಅವರಿಗೆ ಕರೆ ಮಾಡಿ ವಂಚಿಸುತ್ತಿದ್ದ. ತಾನು ಎಸ್‌ಬಿಐ ಮುಖ್ಯ ಕಚೇರಿಯಿಂದ ಕರೆ ಮಾಡುತ್ತಿದ್ದೇನೆ ಎಂದು ಹೇಳಿ, ಫೋನ್ ಪೇನಲ್ಲಿ ಯುಪಿಐ ಐಡಿ ವೇರಿಫೈ ಮಾಡಿ, ಹಣದ ಲಿಮಿಟ್ ಸೆಟ್ ಮಾಡಲು ಹೇಳುತ್ತಿದ್ದ. ಅವರ ಮೂಲಕವೇ ತಾನು ಹೇಳಿದ ಯುಪಿಐ ಐಡಿ ದಾಖಲಿಸಿ, ಚಿನ್ನಾಭರಣ ಹಾಗೂ ಮೊಬೈಲ್ ಮಳಿಗೆಗಳ ಯುಪಿಐಗೆ ಹಣ ವರ್ಗಾಯಿಸಿ, ಸ್ಕ್ರೀನ್ ಶಾಟ್ ತರಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.

- Advertisement -

ಬಳಿಕ ಅದನ್ನು ಮಳಿಗೆಯವರಿಗೆ ತೋರಿಸಿ ಚಿನ್ನದ ನಾಣ್ಯ ಹಾಗೂ ಮೊಬೈಲ್‌ಗಳನ್ನು ಖರೀದಿಸಿ, ಒಎಲ್‌ಎಕ್ಸ್‌ನಲ್ಲಿ ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ ಎನ್ನಲಾಗಿದೆ.

ಆರೋಪಿ ಬೀದರ್ ನ ಕರ್ನಾಟಕ ಕಾಲೇಜಿನಲ್ಲಿ ಬಿಸಿಎ ಪದವಿ ಪೂರೈಸಿದ್ದು, ಹಿಂದೆ ಬೆಂಗಳೂರಿನಲ್ಲಿ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಕೂಡ ₹4.50 ಲಕ್ಷ ಮೌಲ್ಯದ 150 ಮೊಬೈಲ್‌ಗಳನ್ನು ವಂಚಿಸಿ ಬಂಧನಕ್ಕೊಳಗಾಗಿದ್ದ. ಆನಂತರ ಬೆಂಗಳೂರಿನಲ್ಲಿ ಡಾನ್ಸ್ ಬಾರ್‌ಗಳಿಗೆ ಯುವತಿಯರನ್ನು ಕರೆದೊಯ್ಯುವ ಕೆಲಸ ಮಾಡುತ್ತಿದ್ದ. ಡಾನ್ಸ್ ಬಾರ್‌ಗಳು ಬಂದ್ ಆದ ನಂತರ ಆನ್‌ಲೈನ್‌ನಲ್ಲಿ ಜನರನ್ನು ವಂಚಿಸಲು ಆರಂಭಿಸಿದ್ದ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ತಿಳಿಸಿದ್ದಾರೆ. ವರದಿ :ಯೋಹಾನ್ ಪಿ ಹೊನ್ನಡ್ಡಿ ಬೀದರ್

Join Whatsapp