ಹೊಸದಿಲ್ಲಿ: 2018ರ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿಯಾಗಿದ್ದ ಸಾಮಾಜಿಕ ಹೋರಾಟಗಾರ ಮತ್ತು ಕವಿ ಪಿ.ವರವರ ರಾವ್ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ವೈದ್ಯಕೀಯ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ಪೀಠವು ಅವರಿಗೆ ಜಾಮೀನು ನೀಡುವಾಗ, ನ್ಯಾಯಾಲಯದ ಸ್ಪಷ್ಟ ಅನುಮತಿಯಿಲ್ಲದೆ ಮುಂಬೈ ಪ್ರದೇಶವನ್ನು ತೊರೆಯಬಾರದು ಮತ್ತು ಯಾವುದೇ ರೀತಿಯಲ್ಲಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಆದೇಶಿಸಿದೆ.
ವೈದ್ಯಕೀಯ ಆಧಾರದ ಮೇಲೆ ಶಾಶ್ವತ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಬಾಂಬೆ ಹೈಕೋರ್ಟ್ ಎಪ್ರಿಲ್ 13 ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ವರವರ ರಾವ್ ಅವರು ಪ್ರಸ್ತುತ ಮಧ್ಯಂತರ ಜಾಮೀನಿನಲ್ಲಿದ್ದಾರೆ.
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆಗಸ್ಟ್ 28, 2018 ರಂದು ಹೈದರಾಬಾದ್ ನ ಅವರ ಮನೆಯಿಂದ ರಾವ್ ಅವರನ್ನು ಬಂಧಿಸಲಾಗಿತ್ತು. ಸುಪ್ರೀಂ ಕೋರ್ಟ್ ಆದೇಶದಂತೆ ಆರಂಭದಲ್ಲಿ ಗೃಹಬಂಧನದಲ್ಲಿದ್ದ ರಾವ್ ಅವರನ್ನು ಅಂತಿಮವಾಗಿ ನವೆಂಬರ್ 17, 2018 ರಂದು ಪೊಲೀಸ್ ಕಸ್ಟಡಿಗೆ ತೆಗೆದು, ನಂತರ ತಲೋಜಾ ಜೈಲಿಗೆ ಸ್ಥಳಾಂತರಿಸಲಾಗಿತ್ತು.