ಭೀಮಾ ಕೋರೆಗಾಂವ್ ಪ್ರಕರಣ: ಮೂರು ತಿಂಗಳೊಳಗೆ ಚಾರ್ಜ್ ಶೀಟ್ ಸಲ್ಲಿಸಿ – ಸುಪ್ರೀಂಕೋರ್ಟ್ ತಾಕೀತು

Prasthutha|

ನವದೆಹಲಿ: 1967ರ ಕಾನೂನು ಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆ-ಯುಎಪಿಎಯಂತೆ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿಸಿರುವವರ ವಿರುದ್ಧ ಇನ್ನು ಮೂರು ತಿಂಗಳ ಒಳಗೆ ನಿಶ್ಚಿತ ಚಾರ್ಜ್ ಶೀಟ್ ಸಲ್ಲಿಕೆ ಮಾಡಲೇ ಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಭೀಮಾ ಕೋರೆಗಾಂವ್ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ ಐಎ- ರಾಷ್ಟ್ರೀಯ ತನಿಖಾ ಏಜೆನ್ಸಿಗೆ ತಾಕೀತು ಮಾಡಿದೆ.

- Advertisement -

ಜಸ್ಟಿಸ್ ಯು. ಯು. ಲಲಿತ್ ನೇತೃತ್ವದ ಪೀಠವು ಈ ಮೊಕದ್ದಮೆಗೆ ಸಂಬಂಧಿಸಿದಂತೆ ಇನ್ನೂ ನಾಲ್ಕು ಜನರ ಬಂಧನ ಆಗಬೇಕಾಗಿದೆ. 15 ಆರೋಪಿಗಳನ್ನು ಈ ಹಿಂದೆಯೇ ಬಂಧಿಸಲಾಗಿದ್ದು, ಅವರ ವಿಚಾರಣೆ ಇನ್ನಷ್ಟೆ ನಡೆಯಬೇಕಾಗಿದೆ. ನಾಪತ್ತೆಯಾಗಿರುವ ಆರೋಪಿಗಳನ್ನು ಘೋಷಿತ ಅಪರಾಧಿಗಳು ಎಂದು ಘೋಷಿಸುವಂತೆಯೂ ತಿಳಿಸಲಾಯಿತು.

ಸುಪ್ರೀಂ ಕೋರ್ಟಿನ ಸದರಿ ಪೀಠದಲ್ಲಿ ಯು. ಯು. ಲಲಿತ್ ಅಲ್ಲದೆ ಜಸ್ಟಿಸ್ ಎಸ್. ರವೀಂದ್ರ ಭಟ್ ಇದ್ದರು. ಒಬ್ಬ ಆರೋಪಿ ವೆರ್ನಾನ್ ಗೋನ್ಸಾಲ್ವೇಸ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟು ವಿಚಾರಣೆ ನಡೆಸಿತು. ಬಾಂಬೆ ಹೈ ಕೋರ್ಟು ಅವರ ಜಾಮೀನು ಅರ್ಜಿಯನ್ನು ನಿರಾಕರಿಸಿತ್ತು.

- Advertisement -

ಕೆಲವು ಆರೋಪಿಗಳು ವಿಚಾರಣೆಯೇ ನಡೆದಿಲ್ಲ ಎಂದೂ, ಕೆಲವರು ಬಿಡುಗಡೆ ಕೋರಿ ಮತ್ತು ಕೆಲವರು ಒಟ್ಟಿಗೇ ವಿಚಾರಣೆ ನಡೆಸುವಂತೆ ಕೋರಿದ್ದಾರೆ. “ಮುಂದಿನ ಮೂರು ತಿಂಗಳೊಳಗೆ ಚಾರ್ಜ್ ಶೀಟ್ ವಿಚಾರಣೆ ಆಗಬೇಕು” ಎಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿತು.

ಆಗಸ್ಟ್ 2018ರಿಂದ ನಾನು ಜೈಲಿನಲ್ಲಿದ್ದೇನೆ. ಆರೋಪ ಪಟ್ಟಿಯೂ ಇಲ್ಲ; ವಿಚಾರಣೆಯೂ ಇಲ್ಲ ಎಂದು ಗೋನ್ಸಾಲ್ವೇಸ್ ತಿಳಿಸಿದ್ದರು. ಅಲ್ಲದೆ ನನ್ನೊಂದಿಗಿನ ಕೆಲವು ಸಹ ಆರೋಪಿಗಳಿಗೆ ಈಗಾಗಲೇ ಜಾಮೀನು ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ.

ಅವರ ಪರ ಹಾಜರಾದ ಹಿರಿಯ ವಕೀಲ ರೆಬೆಕ್ಕಾ ಜಾನ್ ಅವರು ರಾಷ್ಟ್ರೀಯ ತನಿಖಾ ದಳದವರಿಗೆ ಚಾರ್ಜ್ ಶೀಟ್ ಸಲ್ಲಿಸಲು ವಿಷಯವೇ ಇಲ್ಲ. ಸುಮ್ಮನೆ ಕಾಲ ದೂಡುತ್ತಿದ್ದಾರೆ ಎಂದು ವಾದಿಸಿದರು. ಯುಎಪಿಎಯಲ್ಲಿ ಜಾಮೀನು ಹಲವರಿಗೆ ಈಗಾಗಲೇ ನೀಡಲಾಗಿದೆ ಎಂದೂ ಅವರು ಪೀಠದ ಗಮನಕ್ಕೆ ತಂದರು.

ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್. ವಿ. ರಾಜು ಇದಕ್ಕೆ ಎದುರು ವಾದ ಮಂಡಿಸಿದರು. ಗೋನ್ಸಾಲ್ವೇಸ್ ಸರಕಾರದ ವಿರುದ್ಧ ಯುದ್ಧ ಸಾರಿದ್ದಾರೆ. ಅವರ ಬಳಿ ಕೋಡ್ ಭಾಷೆಯ ಪೆನ್ ಡ್ರೈವ್ ಇತ್ಯಾದಿ ಸಿಕ್ಕಿವೆ. ಅದರ ವಿಷಯ ಡಿಕೋಡ್ ಮಾಡಲು ಫೋರೆನ್ಸಿಕ್ ತಜ್ಞರು ಪ್ರಯತ್ನಿಸುತ್ತಿದ್ದಾರೆ. ಅದು ವಿಚಾರಣೆ ಮತ್ತು ಚಾರ್ಜ್ ಶೀಟ್ ಸಲ್ಲಿಕೆಗೆ ಕಾರಣ” ಎಂದರು.

ಗೋನ್ಸಾಲ್ವೇಸ್ ಮೊದಲ ಬಾರಿಯ ಆರೋಪಿ ಅಪರಾಧಿ ಅಲ್ಲ. ಹಿಂದೆ ನಿಷೇಧಿತ ಸಂಸ್ಥೆಯೊಂದರ ಸದಸ್ಯರಾಗಿ ಅವರು ಶಿಕ್ಷೆಗೊಳಗಾಗಿದ್ದರು ಎಂಬುದನ್ನು ಕೋರ್ಟು ಗಮನಕ್ಕೆ ತೆಗೆದುಕೊಂಡಿತು.

ಮೊದಲ ಬಾರಿಯ ಆರೋಪಿಗಳಿಗೆ ಸಂಶಯದ ಲಾಭ ನೀಡಬಹುದು; ಗೋನ್ಸಾಲ್ವೇಸ್ ಗೆ ಅಲ್ಲ “ನೀವು ನಿಜವಾದ ಮುಗ್ಧ ವ್ಯಕ್ತಿ ಅಲ್ಲ; ನಿಷೇಧಿತ ಸಂಸ್ಥೆಯ ಸದಸ್ಯರಾಗಿದ್ದವರು” ಎಂದೂ ಪೀಠ ಹೇಳಿತು.



Join Whatsapp