ಸಚಿವರ ಮೇಲೆ ಮಸಿ ಎರಚಿದ ಭೀಮ್ ಆರ್ಮಿ ಕಾರ್ಯಕರ್ತ

Prasthutha|

ಮಹಾರಾಷ್ಟ್ರ: ಭೀಮ್ ಆರ್ಮಿಯ ಕಾರ್ಯಕರ್ತನೋರ್ವ ಮಹಾರಾಷ್ಟ್ರದ ಸಚಿವ ಚಂದ್ರಕಾಂತ ಪಾಟೀಲ ಮೇಲೆ ನೀಲಿ ಶಾಯಿ ಎರಚಿರುವ ಘಟನೆ ನಡೆದಿದೆ. ಸಾರ್ವಜನಿಕ ವಲಯದ ಉದ್ಯೋಗಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ನೀತಿ ವಿರುದ್ಧ ಭೀಮ್ ಆರ್ಮಿಯ ಕಾರ್ಯಕರ್ತನ ಪ್ರತಿಭಟನೆ ಇದಾಗಿದೆ.

- Advertisement -

ಸೊಲ್ಲಾಪುರದ ಸರ್ಕಾರಿ ತಂಗುದಾಣದಲ್ಲಿ ಭೀಮ್ ಆರ್ಮಿಯ ಕಾರ್ಯಕರ್ತ ಅಜಯ್ ಮೆಂಡರ್ಗಿಕರ್ ಸೋಲಾಪುರ ಜಿಲ್ಲೆಯ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಮೇಲೆ ನೀಲಿ ಶಾಯಿ ಎರಚಿದ್ದಾರೆ. ಅವರನ್ನು ತಕ್ಷಣ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಚಂದ್ರಕಾಂತ ಪಾಟೀಲ ಅವರು ಇತ್ತೀಚೆಗೆ ಸೋಲಾಪುರ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು ಮತ್ತು ಸೋಲಾಪುರಕ್ಕೆ ಅವರ ಮೊದಲ ಭೇಟಿಯ ವೇಳೆಯೇ ಘಟನೆ ನಡೆದಿದೆ.

- Advertisement -

ಚಂದ್ರಕಾಂತ ಪಾಟೀಲ ಅವರ ಆಗಮನದ ಸಂದರ್ಭದಲ್ಲಿ ಪೊಲೀಸರು ವಿಶ್ರಾಂತಿ ಗೃಹಕ್ಕೆ ಭೇಟಿ ನೀಡುವವರಿಗೆ ಕಟ್ಟುನಿಟ್ಟಿನ ಭದ್ರತಾ ತಪಾಸಣೆ ನಡೆಸಿದ್ದರು. ಭದ್ರತಾ ಕ್ರಮಗಳ ನಡುವೆಯೂ ಅಜಯ್ ಮೆಂಡರ್ಗಿಕರ್ ಪೊಲೀಸ್ ಸರ್ಪಗಾವಲನ್ನು ದಾಟಿ ಸಚಿವರತ್ತ ಮಸಿ ಎರಚಿದ್ದಾರೆ. ಮಸಿ ಎಸೆದ ಘಟನೆಗೂ ಮುನ್ನ ಪ್ರತಿಭಟನಕಾರರು ಕಪ್ಪು ಬಾವುಟ ಪ್ರದರ್ಶಿಸಿ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಪ್ರತಿಭಟನಕಾರರು ಗುತ್ತಿಗೆ ಆಧಾರಿತ ಉದ್ಯೋಗ ನೇಮಕಾತಿಗೆ ವಿರೋಧ ವ್ಯಕ್ತಪಡಿಸಿದ್ದು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ.