ಬೆಂಗಳೂರು: ಹಾಸನದಲ್ಲಿ ಶಾಸಕ ಹೆಚ್ ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಪ್ರಯಾಣಿಸುತ್ತಿದ್ದ ಕಾರಿಗೆ ಬೈಕ್ ಗುದ್ದಿದ ಘಟನೆ ಸಾಕಷ್ಟು ವೈರಲ್ ಆಗಿತ್ತು. ಬೈಕ್ ಸವಾರನನ್ನು ಅಶ್ಲೀಲವಾಗಿ ತರಾಟೆಗೆ ತೆಗೆದುಕೊಳ್ಳುತ್ತಾ ಭವಾನಿ, ಇದು ಒಂದೂವರೆ ಕೋಟಿ ಕಾರು ಎಂದದ್ದೂ ಸಾಕಷ್ಟು ಸಾಕಷ್ಟು ವಿವಾದಕ್ಕೀಡಾಗಿತ್ತು. ವೈರಲ್ ವಿಡಿಯೋದಲ್ಲಿ ಬಡ ಬೈಕ್ ಸವಾರನ್ನು ನಿಂದಿಸೋದು ಮತ್ತು ‘ಒಂದೂವರೆ ಕೋಟಿ’ ಕಾರಿನ ಮೇಲಿನ ಪ್ರೀತಿ ವ್ಯಕ್ತ ವಾಗುತ್ತಿತ್ತೇ ವಿನಹ ಮಾನವೀಯತೆಯ ಒಂದು ಮಾತೂ ಬರುತ್ತಿರಲಿಲ್ಲ. ಈ ಕುರಿತಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭವಾನಿ ರೇವಣ್ಣನವರ ದರ್ಪದ ಮಾತುಗಳಿಗೆ, ಅಹಂಕಾರಕ್ಕೆ ರಾಜ್ಯದ ಜನ ಛೀಮಾರಿ ಹಾಕಿದ್ದರು.
ಇದೀಗ ಈ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಭವಾನಿ ರೇವಣ್ಣನವರ ಅಷ್ಟೂ ಪ್ರೀತಿಯ ಈ ಕಾರು ಆಶ್ಪ್ರಾ ಇನ್ಫ್ರಾ ಇಂಜಿನಿಯರ್ಸ್ ಪ್ರವೈಟ್ ಲಿಮಿಟೆಡ್ ಅನ್ನೋ ಕಂಪನಿ ಹೆಸರಲ್ಲಿ ರಿಜಿಸ್ಟರ್ ಆಗಿದ್ದು ಬೆಳಕಿಗೆ ಬಂದಿದೆ. ಈ ವಿಚಾರ ತಿಳಿಯುತ್ತಿದಂತೆ ಆ ಕಾರನ್ನು ಭವಾನಿ ರೇವಣ್ಣ ಅವರಿಗೆ ಗುತ್ತಿಗೆದಾರರು ಕೊಟ್ಟಿದ್ಯಾಕೆ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯ ಕಾರ್ಯದರ್ಶಿ ವಿ.ಆರ್.ಮರಾಠೆ, ಸಾಮಾಜಿಕ ಕಾರ್ಯಕರ್ತ ರೊನಾಲ್ಡ್ ಪ್ರಶ್ನೆ ಮಾಡಿದ್ದಾರೆ.
ಆಶ್ಪ್ರಾ ಇನ್ಫ್ರಾ ಇಂಜಿನಿಯರ್ಸ್ ಪ್ರವೈಟ್ ಲಿಮಿಟೆಡ್ ಅನ್ನೋ ಕಂಪನಿ ಬಿಬಿಎಂಪಿ ಕಂಟ್ರಾಕ್ಟರ್ ಕಂಪೆನಿ ಆಗಿದ್ದು, ಇದಕ್ಕೂ ಗೌಡ್ರ ಕುಟುಂಬಕ್ಕೂ ಸಂಬಂಧವೇನು ಅನ್ನೋ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ಈ ಕಾರು ಕಾಂಟ್ರಾಕ್ಟ್ ದೊರಕಿಸಿಕೊಟ್ಟದ್ದಕ್ಕೆ ಸಿಕ್ಕ ಬೇನಾಮಿ ಉಡುಗೊರೆಯೋ ಎಂದು ಜನರು ಕೇಳುತ್ತಿದ್ದಾರೆ.
ತಪ್ಪು ಮಾಡಿದ್ದ ಭವಾನಿಯವರು ಇದುವರೆಗೂ ಕ್ಷಮೆ ಕೇಳಿಲ್ಲ. ಅವರ ಮಕ್ಕಳು ಹಾಗೂ ಪತಿ ರೇವಣ್ಣ ಅಡ್ಡಗೋಡೆ ಮೇಲೆ ದಿಪವಿಟ್ಟಂತೆ ಕ್ಷಮೆ ಕೋರಿದ್ದು, ಸದ್ಯ ಇದೀಗ ಕಾರಿನ ಮಾಲೀಕತ್ವದ ಕುರಿತು ಪರಿಶೀಲನೆ ಮಾಡಿದಾಗ ಭವಾನಿ ಪ್ರಯಾಣ ಮಾಡುತ್ತಿದ್ದ ಕಾರು ಬಿಬಿಎಂಪಿಯ ಪ್ರಥಮ ದರ್ಜೆ ಗುತ್ತಿಗೆದಾರರಿಗೆ ಸೇರಿದಾಗಿದೆ ಎಂಬ ವಿಚಾರ ಬಯಲಾಗಿ ಹೊಸ ಚರ್ಚೆ ಹುಟ್ಟು ಹಾಕಿದೆ.