LPGಗೆ ಆಧಾರ್ ಜೋಡಣೆ: ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ ಎಂದ ಕೇಂದ್ರ ಸರಕಾರ

Prasthutha|

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಕಲಿ ಬಳಕೆದಾರರನ್ನು ಪತ್ತೆ ಹಚ್ಚಲು ಎಲ್‌ಪಿಜಿಗೆ ಗ್ರಾಹಕರ ಆಧಾರ್‌ ಸಂಖ್ಯೆ ಜೋಡಣೆ ಕಾರ್ಯ ಮಾಡುತ್ತಿವೆ. ಆದರೆ, ಈ ಪ್ರಕ್ರಿಯೆಗೆ ಸರ್ಕಾರ ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ.

- Advertisement -

‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಸಚಿವರು, ಗ್ರಾಹಕರ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕೆ ಸಂಬಂಧಿಸಿದಂತೆ ತೈಲ ಕಂಪನಿಗಳ ಬಳಿ ಸಾಕಷ್ಟು ಆಯ್ಕೆಗಳಿವೆ. ಆದರೆ, ಇದನ್ನು ಪೂರ್ಣಗೊಳಿಸಲು ಕಂಪನಿ ಅಥವಾ ಸರ್ಕಾರವು ಯಾವುದೇ ಸಮಯ ನಿಗದಿಪಡಿಸಿಲ್ಲ. ಅಲ್ಲದೆ, ತೈಲ ಕಂಪನಿಗಳು ಕೂಡ ಏಜೆನ್ಸಿಗಳ ವ್ಯಾಪ್ತಿಗೆ ಬರುವ ಗ್ರಾಹಕರ ಸಂಖ್ಯೆಯ ಬಗ್ಗೆ ಮಾಹಿತಿ ಪ್ರಕಟಿಸಿಲ್ಲ ಎಂದು ಹೇಳಿದ್ದಾರೆ.

ವಾಣಿಜ್ಯ ಸಿಲಿಂಡರ್‌ ಬಳಕೆದಾರರ ಪಟ್ಟಿಯಲ್ಲಿರುವ ಕೆಲವರು ಆಗಾಗ ದಿನಬಳಕೆಯ ಸಿಲಿಂಡರ್‌ ಬುಕಿಂಗ್‌ ಮಾಡುತ್ತಾರೆ. ಇಂತಹ ಬಳಕೆದಾರರಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

- Advertisement -

ಗ್ರಾಹಕರಿಗೆ ನೀಡುವ ಸಬ್ಸಿಡಿ ಸೌಲಭ್ಯ ಪಡೆಯಲು ಎಲ್‌ಪಿಜಿ ಬಳಕೆದಾರರು ಆಧಾರ್‌ ಜೋಡಣೆ ಮಾಡುವುದು ಕಡ್ಡಾಯವಾಗಿದೆ ಎಂದೂ ಹೇಳಿದ್ದಾರೆ.

ಅಡುಗೆ ಅನಿಲ ಸಿಲಿಂಡರ್ ಗ್ರಾಹಕರು ಇ-ಕೆವೈಸಿ ಅಪ್‌ಡೇಟ್‌ ಮಾಡಲು ಗ್ಯಾಸ್‌ ಏಜೆನ್ಸಿಗಳಿಗೆ ಎಡತಾಕುತ್ತಿದ್ದಾರೆ. ಇದರಿಂದ ತೊಂದರೆ ಎದುರಿಸುತ್ತಿದ್ದಾರೆ. ಅದರಲ್ಲೂ ಮಹಿಳೆಯರು ಮತ್ತು ಹಿರಿಯ ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್‌ ಸಚಿವ ಪುರಿ ಅವರಿಗೆ ಪತ್ರ ಬರೆದಿದ್ದರು.



Join Whatsapp