ಕೊಚ್ಚಿ: 5 ವರ್ಷಗಳ ಹಿಂದೆ ಭಾರಿ ಕೋಲಾಹಲ ಸೃಷ್ಟಿಸಿದ್ದ ನಟಿಯ ಅಪಹರಣ, ಲೈಂಗಿಕ ಕಿರುಕುಳ ವಿಚಾರದಲ್ಲಿ ಕೊನೆಗೂ ಸಂತ್ರಸ್ತ ನಟಿ ಮೌನ ಮುರಿದಿದ್ದಾರೆ. ಬಹುಭಾಷ ನಟಿ ಭಾವನಾ ಮೆನನ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತಾವು ಅನುಭವಿಸಿದ ಅವಮಾನದ ಕುರಿತು ವಿವರಿಸಿದ್ದಾರೆ.
“ಇದು ಸುಲಭದ ಪ್ರಯಾಣವಾಗಿರಲಿಲ್ಲ. ಬಲಿಪಶುವಿನಿಂದ ಬದುಕುಳಿಯುವ ಪ್ರಯಾಣವಾಗಿತ್ತು. ಕಳೆದ 5 ವರ್ಷಗಳಿಂದ, ನನ್ನ ಮೇಲೆ ಮಾಡಿದ ಹಲ್ಲೆಯ ವಿಚಾರದಲ್ಲಿ ನನ್ನ ಹೆಸರು ಮತ್ತು ಗುರುತನ್ನು ಹತ್ತಿಕ್ಕಲಾಗಿದೆ. ಯಾವುದೇ ಅಪರಾಧವನ್ನು ಮಾಡದಿದ್ದರೂ ನನ್ನನ್ನು ಅವಮಾನಿಸುವ, ನನ್ನ ಧ್ವನಿಯನ್ನು ಅಡಗಿಸುವ ಮತ್ತು ಪ್ರತ್ಯೇಕಿಸುವ ಅನೇಕ ಪ್ರಯತ್ನಗಳು ನಡೆದಿವೆ. ಆದರೆ ಈ ಸಮಯದಲ್ಲಿ ನನ್ನ ಧ್ವನಿಯನ್ನು ಜೀವಂತವಾಗಿಡಲು ಕೆಲವರು ನನ್ನ ಜೊತೆಗಿದ್ದರು. ಈಗ ನನ್ನ ಪರವಾಗಿ ಅನೇಕರು ಮಾತನಾಡುತ್ತಿದ್ದಾರೆ. ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟದಲ್ಲಿ ನಾನು ಏಕಾಂಗಿಯಲ್ಲ. ತಪ್ಪಿತಸ್ಥರು ಕಾನೂನಿನ ಪ್ರಕಾರ ಶಿಕ್ಷೆ ಅನುಭವಿಸಲಿ. ನಾನು ಅನುಭವಿಸಿದ ಪರಿಸ್ಥಿತಿ ಇನ್ಯಾರಿಗೂ ಬಾರದೇ ಇರಲಿ. ನನ್ನ ಹೋರಾಟದ ಹಾದಿಯಲ್ಲಿ ಜೊತೆಗಿರುವ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು’ ಎಂದು ಭಾವನಾ ಮೆನನ್ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.
ಏನಿದು ಘಟನೆ ?
2017ರಲ್ಲಿ ಕೊಚ್ಚಿ ನಗರದ ಹೊರವಲಯದಲ್ಲಿ ಚಿತ್ರೀಕರಣ ಮುಗಿಸಿ ಮನೆಗೆ ಹಿಂತಿರುಗುವ ವೇಳೆ ನಟಿ ಭಾವನಾ ಅವರ ಮೇಲೆ ದಾಳಿ ನಡೆದಿತ್ತು. ಅಪಹರಣಕಾರರು ನಟಿ ಸಂಚರಿಸುತ್ತಿದ್ದ ಕಾರನ್ನು ದಾರಿತಪ್ಪಿಸಿದ ಬಳಿಕ ಬೇರೊಂದು ವ್ಯಾನ್’ನಲ್ಲಿ ನಟಿಯನ್ನು ಅಪಹರಿಸಿದ್ದರು. ಕೇರಳದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದ್ದ ಈ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಬಂಧನಕ್ಕೆ ಒಳಗಾಗಿ ಜೈಲುವಾಸ ಅನುಭವಿಸಿದ್ದರು.
ನ್ಯಾಯಾಲಯದಲ್ಲಿ ಸುದೀರ್ಘವಾಗಿ ವಾದ-ಪ್ರತಿವಾದಗಳು ನಡೆಯುತ್ತಿರುವ ಮಧ್ಯೆ ಇತ್ತೀಚೆಗಷ್ಟೇ ಪ್ರಕರಣದ ತನಿಖಾ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ನಟ ದಿಲೀಪ್ ಮತ್ತು ಇತರ ಐವರ ವಿರುದ್ಧ ಕೇರಳ ಕ್ರೈಂ ಬ್ರಾಂಚ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.