ಗೋ ಹತ್ಯೆ ಕುರಿತು ಭರತ್ ಶೆಟ್ಟಿ ಹೇಳಿಕೆ: ಶಾಸಕರೇ ನಿಮ್ಮನ್ನು ದನಕಾಯಲು ಆಯ್ಕೆ ಮಾಡಿದ್ದಲ್ಲ ಎಂದ ನೆಟ್ಟಿಗರು

Prasthutha|

ಮಂಗಳೂರು : ಇನ್ನು ಮುಂದೆ ಅಕ್ರಮವಾಗಿ ಗೋ ಹತ್ಯೆ ಪ್ರಕರಣವನ್ನು ಮಟ್ಟ ಹಾಕಲು ಆರೋಪಿಗಳ ಆಸ್ತಿ ಮುಟ್ಟು ಗೋಲು ದಂಡಾಸ್ತ್ರ ಬಳಸಲಾಗುವುದು ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ನೀಡಿರುವ ಹೇಳಿಕೆಗೆ ಸಾಮಾಜಿಕ ಜಾಲತಾಣದಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

- Advertisement -

ಸುರತ್ಕಲ್ ನಲ್ಲಿ ಅಕ್ರಮ ಟೋಲ್ ನಿರ್ಮಿಸಿ ಜನರ ಹಣ ಲೂಟಿ ಮಾಡುವ ಬಗ್ಗೆ ಏನೂ ಮಾತನಾಡದ ಶಾಸಕರು, ದನ ಕಾಯಲು ಹೊರಟಿದ್ದಾರೆ. ಆದ್ದರಿಂದ ಶಾಸಕರೇ ಮೊದಲು ಅಕ್ರಮ ಟೋಲ್ ತೆರವುಗೊಳಿಸಿ ನಿಮ್ಮನ್ನು ಆರಿಸಿದ್ದು “ದನಕಾಯಲು ಅಲ್ಲ, ಜನಕಾಯಲು” ಎಂದು ಫೇಸ್ ಬುಕ್ ಬಳಕೆದಾರರು ಭರತ್ ಶೆಟ್ಟಿಗೆ ಕ್ಲಾಸ್ ತೆಗೆಯುತ್ತಿದ್ದಾರೆ.

ಸುರತ್ಕಲ್ ಟೋಲ್ ಅಕ್ರಮ ಎಂದು ಗೊತ್ತಿದ್ದರೂ ಅದರ ಬಗ್ಗೆ ಧ್ವನಿ ಎತ್ತದ ಶಾಸಕರು, ಕೋಮು ಸೂಕ್ಷ್ಮ ವಿಷಯಗಳು ಹಾಗೂ ಜನರ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ರಾಜಕೀಯ ಮಾಡಲು ಹೊರಟಿದ್ದಾರೆ. ಅಭಿವೃದ್ಧಿ ವಿಷಯಗಳಲ್ಲಿ ಶೂನ್ಯ ಸಾಧನೆ ಮಾಡಿರುವ ಭರತ್ ಶೆಟ್ಟಿ, ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಈ ಹಿಂದಿನ ಶಾಸಕರು ಮಾಡಿದಷ್ಟು ಕೆಲಸಗಳನ್ನು ಕೂಡ ಮಾಡುವಲ್ಲಿ ಶೆಟ್ಟಿ ವಿಫಲರಾಗಿದ್ದಾರೆ ಎಂದು ಕ್ಷೇತ್ರದ ಜನರು ಆರೋಪಿಸುತ್ತಿದ್ದಾರೆ.

- Advertisement -

ಸುರತ್ಕಲ್ ಫ್ಲೈ ಓವರ್ ಗೆ ಸಾವರ್ಕರ್ ಹೆಸರು ನಾಮಕರಣಕ್ಕೆ ಪ್ರಯತ್ನ, ಮೃತಪಟ್ಟವರ ಹೆಸರನ್ನು ಬಸ್ ನಿಲ್ದಾಣಕ್ಕೆ ನಾಮಕರಣ, ಅಪರಾಧ ಹಿನ್ನೆಲೆ ಇರುವವರೊಂದಿಗೆ ಫೋಟೋಗೆ ಪೋಸ್ ಕೊಟ್ಟು ವೈರಲ್ ಮಾಡುವುದು ಇಂತಹ ಸೂಕ್ಷ್ಮ ವಿಷಯಗಳಲ್ಲೇ ಅವರು ಕಾಲ ಕಳೆಯುತ್ತಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ಸಾರ್ವಜನಿಕರು, ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದರೂ ತಿರುಗಿಯೂ ನೋಡದ MLA ಭಾರತ್ ಶೆಟ್ಟಿ, ಇದೀಗ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಮನೆ ಹಾನಿ, ಗುಡ್ಡ ಕುಸಿತ ಸಂಭವಿಸಿದ್ದು, ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಜನ ಸಂಪರ್ಕಕ್ಕೆ ಸಿಗುತ್ತಿಲ್ಲ. ಆದರೆ ಬಕ್ರೀದ್ ಹಬ್ಬ ಬರುತ್ತಿದ್ದಂತೆ ಗೋ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಕ್ಷೇತ್ರದ ಜನರು ಕಿಡಿಕಾರಿದ್ದಾರೆ.

ಅವೈಜ್ಞಾನಿಕ ಕಾಮಗಾರಿಯಿಂದ ನಗರವೇ ತತ್ತರಿಸಿ ಹೋಗಿದ್ದು, ಹಲವೆಡೆ ಅಪಾರ ಹಾನಿಗಳು ಸಂಭವಿಸಿದೆ. ಆದರೆ ಜನರ ಬಗ್ಗೆ ತಲೆಕೆಡಿಸದ ಶಾಸಕರು ಮುಸ್ಲಿಮರ ಹಬ್ಬ ಬರುವಾಗ ಗೋ ರಕ್ಷಣೆಯಲ್ಲಿ ಬ್ಯುಸಿಯಾಗಿದ್ದಾರೆ ಎಂದು ಸಾರ್ವಜನಿಕರು ಟೀಕಿಸುತ್ತಿದ್ದಾರೆ.



Join Whatsapp