ರಾಯಚೂರು: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಕರ್ನಾಟಕದಲ್ಲಿ ಕೊನೆಯ ಹಂತವನ್ನು ಪೂರೈಸುತ್ತಿದ್ದು, ಈ ಯಾತ್ರೆಯಲ್ಲಿ ಸಿಕ್ಕ ಜನ ಬೆಂಬಲದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು 150 ಕ್ಷೇತ್ರ ಗೆದ್ದೇ ಗೆಲ್ಲುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಈ ಕುರಿತು ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಯಾವ ರೀತಿ ಬೇಕಾದರೂ ಮಾತನಾಡುತ್ತಾರೆ. 3,570 ಕಿ.ಮೀ ನಡೆಯುವ ಧೈರ್ಯ ಯಾವ ನಾಯಕರು ಮಾಡುತ್ತಾರೆ. ಖಂಡಿತ ಈ ಯಾತ್ರೆ ದೇಶದಲ್ಲಿ ಬದಲಾವಣೆಗೆ ಕಾರಣವಾಗುತ್ತೇ, ಈ ಹೆಜ್ಜೆ ಬದಲಾವಣೆ ಹೆಜ್ಜೆ. ರಾಹುಲ್ ಗಾಂಧಿ ಪಡುತ್ತಿರುವ ಶ್ರಮ ತ್ಯಾಗವಾಗಿದೆ. ಪಕ್ಷದ ಅಧಿಕಾರ ಬೇಡ ಎಂದು ಜನರಿಗಾಗಿ ನಡೆಯುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಐಕ್ಯತಾ ಯಾತ್ರೆ ನಾಳೆ ಬೆಳಿಗ್ಗೆ 11ಕ್ಕೆ ಮುಕ್ತಾಯವಾಗಲಿದೆ. ಯಾತ್ರೆಯಲ್ಲಿ ಇದುವರೆಗೆ ಲಕ್ಷಾಂತರ ಜನ ಭಾಗಿಯಾಗಿದ್ದಾರೆ. ರೈತರು, ಮಕ್ಕಳು, ಮಹಿಳೆಯರು, ಯುವಕರು ಪಕ್ಷ ನೋಡದೆ ಯಾತ್ರೆಯಲ್ಲಿ ಭಾಗವಹಿಸುತ್ತಿರುವುದನ್ನ ರಾಹುಲ್ ಗಾಂಧಿ ಗಮನಿಸಿದ್ದಾರೆ. ಇಂದಿರಾಗಾಂಧಿಯವರನ್ನ ನೋಡಲು ಜನ ಹೇಗೆ ಬರುತ್ತಿದ್ದರೋ ಅದೇ ರೀತಿ ರಾಹುಲ್ ಗಾಂಧಿಯನ್ನ ನೋಡಲು ಬರುತ್ತಿದ್ದಾರೆ ಎಂದರು.