ನವದೆಹಲಿ: ಒಂದು ವಾರದ ವಿಶ್ರಾಂತಿಯ ಬಳಿಕ ಜನವರಿ 3 ಮಂಗಳವಾರ ಬೆಳಿಗ್ಗೆ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಭಾರತ್ ಜೋಡೋ ದಿಲ್ಲಿಯಿಂದ ಮತ್ತೆ ಹೊರಟಿದೆ.
2023ರ ಜನವರಿ 30ರಂದು ಗಾಂಧೀಜಿ ಪುಣ್ಯ ದಿನದಂದು ಭಾರತ್ ಜೋಡೋ ಯಾತ್ರೆ ಶ್ರೀನಗರದಲ್ಲಿ ಸಮಾರೋಪಗೊಳ್ಳಲಿದೆ.
ಈ ಮಧ್ಯೆ ಅಯೋಧ್ಯೆಯ ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ಬರೆದ ಪತ್ರವೊಂದು ರಾಹುಲ್ ಗಾಂಧಿಗೆ ತಲುಪಿದೆ. ಮಂಗಳವಾರ ಮಧ್ಯಾಹ್ನ ಭಾರತ್ ಜೋಡೋ ಯಾತ್ರೆ ಉತ್ತರ ಪ್ರದೇಶ ತಲುಪುವುದರಿಂದ ಸತ್ಯೇಂದ್ರ ದಾಸ್ ಔಪಚಾರಿಕ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅರ್ಚಕರು ರಾಹುಲ್ ಗಾಂಧಿ ಅವರನ್ನು ಆಶೀರ್ವದಿಸಿ ಯಾತ್ರೆಗೆ ಶುಭಕೋರಿದ್ದಾರೆ.
ಈ ಪತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅಯೋಧ್ಯೆಯ ಹನುಮಾನ್ ಆಲಯದ ಅರ್ಚಕ ರಾಜು ದಾಸ್, ಪತ್ರ ಬರೆದಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಕಾಂಗ್ರೆಸ್ ಸದಾ ಹಿಂದೂ ವಿರೋಧಿ ಪಕ್ಷ ಎಂದು ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.