ಹೈದರಾಬಾದ್: 2016 ರಲ್ಲಿ ಕಿರುಕುಳದ ಆರೋಪದ ಮೇಲೆ ಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ತಾಯಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ಮಂಗಳವಾರ ಹೈದರಾಬಾದ್ ನಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ.
ಯಾತ್ರೆಯ ಬೆಳಗಿನ ಅವಧಿಯಲ್ಲಿ ರಾಧಿಕಾ ವೇಮುಲ ರಾಹುಲ್ ಗಾಂಧಿಯೊಂದಿಗೆ ಸ್ವಲ್ಪ ಹೊತ್ತು ನಡೆದಿದ್ದು, ಆ ಬಳಿಕ ಟ್ವೀಟ್ ಮಾಡಿದ ಅವರು, ಬಿಜೆಪಿ-ಆರ್ಎಸ್ಎಸ್ ದಾಳಿಯಿಂದ ಸಂವಿಧಾನವನ್ನು ಉಳಿಸಲು ಕಾಂಗ್ರೆಸ್ ಗೆ ಕರೆ ನೀಡಿದರು. ರೋಹಿತ್ ವೇಮುಲಾಗೆ ನ್ಯಾಯ, ರೋಹಿತ್ ಕಾಯ್ದೆಯನ್ನು ಅಂಗೀಕರಿಸುವುದು, ಉನ್ನತ ನ್ಯಾಯಾಂಗದಲ್ಲಿ ದಲಿತರು, ತುಳಿತಕ್ಕೊಳಗಾದ ವರ್ಗಗಳ ಪ್ರಾತಿನಿಧ್ಯವನ್ನು ಹೆಚ್ಚಿಸುವುದು, ಎಲ್ಲರಿಗೂ ಶಿಕ್ಷಣ ನೀಡಬೇಕು ಎಂದು ರಾಧಿಕಾ ವೇಮುಲಾ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮತ್ತು ಪಕ್ಷದ ಹಲವಾರು ನಾಯಕರು ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಧಿಕಾ ವೇಮುಲಾ ಅವರು, ರಾಹುಲ್ ಗಾಂಧಿಯೊಂದಿಗೆ ನಡೆದಾಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ
ಜನವರಿ 17, 2016 ರಂದು 26 ವರ್ಷದ ದಲಿತ ವಿದ್ಯಾರ್ಥಿಯ ಸಾವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ತಾರತಮ್ಯ ನೀತಿ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನವನ್ನು ಪ್ರಚೋದಿಸಿತು.