ಭಾರತ್ ಜೋಡೋ: ಕರ್ನಾಟಕದಲ್ಲಿ 21 ದಿನ 510 ಕಿ.ಮೀ ದೂರ ಪಾದಯಾತ್ರೆ- ಡಿ.ಕೆ.ಶಿವಕುಮಾರ್

Prasthutha|

ಬೆಂಗಳೂರು: ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆಯ ಮಾರ್ಗದ ವಿಚಾರವಾಗಿ ನಾವು ಚರ್ಚೆ ಮಾಡುತ್ತಿದ್ದು, ರಾಜ್ಯದಲ್ಲಿನ ಪಾದಯಾತ್ರೆಯ ಉಸ್ತುವಾರಿಯನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ನೀಡಲಾಗಿದೆ. ಜಿಲ್ಲಾ ನಾಯಕರಿಗೆ ಕೆಲವು ಜವಾಬ್ದಾರಿ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿತ್ಯ ಎಷ್ಟು ದಿನ ನಡೆಯಬೇಕು, ಎಲ್ಲೆಲ್ಲಿ ಭೇಟಿ ನೀಡಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಚರ್ಚೆ ಮಾಡಲಾಗುತ್ತಿದೆ. ಸೆ. 7 ರಂದು ರಾಜೀವ್ ಗಾಂಧಿ ಅವರ ಸಮಾಧಿಗೆ ನಮಿಸಿ, ಸಭೆ ನಡೆಸಿ ಕನ್ಯಾಕುಮಾರಿಯಿಂದ ಪಾದಯಾತ್ರೆ ಆರಂಭಿಸಲಾಗುವುದು. ಇಡೀ ಕಾರ್ಯಕ್ರಮದ ಮಾಹಿತಿಯನ್ನು ಎಐಸಿಸಿಯವರು ಪ್ರಕಟಿಸಲಿದ್ದಾರೆ ಎಂದು ಹೇಳಿದರು.

ಕರ್ನಾಟಕ ರಾಜ್ಯದಲ್ಲಿ 510 ಕಿ.ಮೀ ದೂರ 21 ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ಕೆಲವು ಕಡೆ ಅರಣ್ಯ ಪ್ರದೇಶವಿದ್ದು, ಅಲ್ಲಿ ನಡೆಯಬೇಕೆ ಬೇಡವೇ ಎಂಬ ವಿಚಾರವಾಗಿ ಸ್ಥಳೀಯ ಪೋಲೀಸರ ಜತೆ ಚರ್ಚಿಸಿ ದೆಹಲಿಯ ತಂಡ ತೀರ್ಮಾನಿಸಲಿದೆ. ನಮ್ಮ ರಾಷ್ಟ್ರೀಯ ನಾಯಕರು ಇದರಲ್ಲಿ ಭಾಗವಹಿಸಲಿದ್ದು, ರಾಜ್ಯದ ಮಾಹಿತಿಯನ್ನು ಶೀಘ್ರದಲ್ಲಿ ತಿಳಿಸುತ್ತೇವೆ. ರಾಜ್ಯದಲ್ಲಿ 8 ಜಿಲ್ಲೆಗಳ ಮೂಲಕ ಈ ಪಾದಯಾತ್ರೆ ಸಾಗಲಿದ್ದು, ಬಳ್ಳಾರಿ ಹೊರತಾಗಿ ಚಿತ್ರದುರ್ಗ, ತುಮಕೂರು, ಮಂಡ್ಯ, ಚಾಮರಾಜನಗರ, ಮೈಸೂರು ಜಿಲ್ಲೆಗಳ ಮಾರ್ಗವನ್ನು ಖುದ್ದಾಗಿ ನೋಡಿದ್ದೇನೆ. ಇಡೀ ರಾಜ್ಯದ ಕಾರ್ಯಕರ್ತರು ಹಾಗೂ ಮುಖಂಡರು ಹೆಜ್ಜೆ ಹಾಕಲಿದ್ದಾರೆ ಎಂದು ಡಿಕೆಶಿ ಹೇಳಿದರು.

- Advertisement -

ಭಾರತವನ್ನು ಒಗ್ಗೂಡಿಸಲು, ಶಾಂತಿ, ಸೌಹಾರ್ದತೆ ಸ್ಥಾಪಿಸಿ, ಜನರ ಸಮಸ್ಯೆಯನ್ನು ಚರ್ಚೆ ಮಾಡಲು ದೇಶದಾದ್ಯಂತ ಸುಮಾರು 600ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಸೇರಿ ಚರ್ಚೆ ಮಾಡಿದ್ದಾರೆ. ಅದರಂತೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಗಾಗಿ ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ. ಪಾದಯಾತ್ರೆ ಮಾಡಬೇಕು ಎಂಬ ಸೂಚನೆ ನೀಡಲಾಗಿತ್ತು. ಆದರೆ ನಮ್ಮ ನಾಯಕರು ಜಿಲ್ಲೆಯಲ್ಲಿ ಅಲ್ಲ, ಕ್ಷೇತ್ರದಲ್ಲೇ 200 ಕಿ.ಮೀ. ದೂರ ಪಾದಯಾತ್ರೆ ಮಾಡಿದ್ದಾರೆ. ಜಿಲ್ಲಾ ಮಟ್ಟದ ಪಾದಯಾತ್ರೆ ಅವಧಿಯನ್ನು ಆಗಸ್ಟ್ 30 ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಕುರಿತ ಎಲ್ಲ ವರದಿಯನ್ನು ಮಾಧ್ಯಮಗಳ ಮುಂದೆ ತಿಳಿಸುತ್ತೇನೆ. ಈ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಾವು ಜನರ ಸಮಸ್ಯೆಯನ್ನು ಆಲಿಸುತ್ತಿದ್ದೇವೆ ಎಂದು ನಮ್ಮ ನಾಯಕರು ತಿಳಿಸಿದ್ದಾರೆ. ಉಳಿದಂತೆ 15 ರಂದು ರಾಜ್ಯಮಟ್ಟದಲ್ಲಿ ತಿರಂಗಾ ಯಾತ್ರೆ ಮಾಡಿದ್ದೇವೆ. ಆ ಮೂಲಕ ಉದಯಪುರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದರು.

ನಾವು ಶೀಘ್ರದಲ್ಲೇ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ಕರೆದು ಭಾರತ್ ಜೋಡೋ ಕಾರ್ಯಕ್ರಮದ ವಿಚಾರವಾಗಿ ಚರ್ಚೆ ಮಾಡುತ್ತೇವೆ. ಅದಕ್ಕೂ ಮೊದಲು ಇಂದು ಪ್ರಾಥಮಿಕವಾಗಿ ನಾನು, ಬಿ.ಕೆ. ಹರಿಪ್ರಸಾದ್ ದೆಹಲಿ ತಂಡದ ಜತೆ ಚರ್ಚೆ ಮಾಡುತ್ತಿದ್ದೇವೆ. ಪಾದಯಾತ್ರೆ ಹಾದು ಹೋಗುವ ಜಿಲ್ಲೆಗಳ ನಾಯಕರನ್ನು ಕರೆದು ಚರ್ಚೆ ಮಾಡುತ್ತೇವೆ. ಸ್ಥಳೀಯರು ಈ ಪಾದಯಾತ್ರೆಯಲ್ಲಿ ಯಾವ ರೀತಿ ಭಾಗವಹಿಸಬೇಕು ಎಂಬ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

ವಿಜಯಪುರದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಾರ್ವಕರ್ ಫೋಟೋ ಹಾಕಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈ ವಿಚಾರವಾಗಿ ಬೊಮ್ಮಾಯಿ ಅವರು ಉತ್ತರ ನೀಡಬೇಕು. ರಾಜ್ಯದಲ್ಲಿ ಶಾಂತಿ ಕಾಪಾಡಬೇಕಿರುವುದು ಬೊಮ್ಮಾಯಿ ಅವರ ಜವಾಬ್ದಾರಿ. ದೇಶದಲ್ಲಿ ಕಾಂಗ್ರೆಸಿಗರು ಇನ್ನೂ ಬದುಕಿದ್ದಾರೆ. ನಾವು ಪ್ರಚೋದನಕಾರಿ ಹೇಳಿಕೆ ನೀಡಿ, ಕಾಂಗ್ರೆಸಿಗರನ್ನು ಎತ್ತಿ ಕಟ್ಟಿ, ಕಪ್ಪು ಬಾವುಟ ಹಿಡಿಯಿರಿ ಎಂದು ಹೇಳುವ ಅಗತ್ಯವಿಲ್ಲ. ಶಾಂತಿ, ಸೌಹಾರ್ದತೆ, ಅಹಿಂಸಾ ತತ್ವವನ್ನು ಮಹಾತ್ಮಾ ಗಾಂಧಿ ಅವರು ನಮಗೆ ಕಲಿಸಿಕೊಟ್ಟಿದ್ದಾರೆ. ನಮ್ಮ ನಾಯಕರು ಹಾಗೂ ದೇಶದ ಪ್ರಥಮ ಪ್ರಧಾನಮಂತ್ರಿಗಳ ಹೆಸರು, ಫೋಟೋವನ್ನೇ ಈ ಸರ್ಕಾರ ಕೈಬಿಟ್ಟಿದೆ. ಅದಕ್ಕೆ ಜನ ಆಗಸ್ಟ್ 15ರಂದು ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮಕ್ಕೆ ಆಗಮಿಸಿ ಅವರಿಗೆ ಉತ್ತರ ನೀಡಿದ್ದಾರೆ. ನಂತರ ಪ್ರಧಾನಮಂತ್ರಿಗಳು ನೆಹರೂ ಅವರ ಹೆಸರು ಸ್ಮರಿಸಿದ್ದಾರೆ. ಇತಿಹಾಸವನ್ನು ಯಾರೂ ತಿರುಚಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

ರಾಜ್ಯದಲ್ಲಿ ಶಾಂತಿ ಭಂಗ ಪ್ರಕರಣಗಳು ಹೆಚ್ಚಾಗುತ್ತಿದ್ದರೆ, ಕಾನೂನು ಸುವ್ಯವಸ್ಥೆ ಏನಾಗಬೇಕು ಎಂಬ ಪ್ರಶ್ನೆಗೆ, ‘ನಮ್ಮ ನಾಯಕರಿಗೆ ಯಾರೋ ಕಪ್ಪು ಬಾವುಟ ಪ್ರದರ್ಶಿಸಿ, ಮೊಟ್ಟೆ ಹೊಡೆದು, ಧಿಕ್ಕಾರ ಕೂಗಿದರು ಎಂಬುದು ಮುಖ್ಯವಲ್ಲ. ಅಧಿಕಾರದಲ್ಲಿ ಇದ್ದಾಗ ನಾವು ಜನರಿಗೆ ಏನು ಕೊಡುಗೆ ನೀಡಿದ್ದೇವೆ ಎಂಬುದು ಮುಖ್ಯ. ಸಿದ್ದರಾಮಯ್ಯ ಅವರು ಕೇವಲ ಒಬ್ಬ ನಾಯಕರಲ್ಲ. ಅವರಿಗೆ ಸಂವಿಧಾನದ ಮೂಲಕ ವಿರೋಧ ಪಕ್ಷದ ನಾಯಕರ ಜವಾಬ್ದಾರಿ ನೀಡಲಾಗಿದೆ. ಹಳ್ಳಿಗಳಿಗೆ, ನೆರೆ ಪ್ರದೇಶಕ್ಕೆ ಹೋಗಿ ಜನರಿಗೆ ಧ್ವನಿಯಾಗುವುದು ಅವರ ಕರ್ತವ್ಯ. ಆ ಕರ್ತವ್ಯ ಮಾಡಬಾರದು, ಮಾಡಿದರೆ ಕಪ್ಪು ಬಾವುಟ ಪ್ರದರ್ಶಿಸುತ್ತೇನೆ, ಮೊಟ್ಟೆ ಹೊಡೆಯುತ್ತೇವೆ ಎನ್ನುವುದು ಸರಿಯಲ್ಲ. ನೀವು ಕೇವಲ ಮೊಟ್ಟೆಯಲ್ಲ, ಏನಾದರೂ ಹೊಡೆಯಿರಿ. ಆದರೆ ಅದೇ ಕೆಲಸವನ್ನು ಬೇರೆ ಪಕ್ಷದವರು ಮಾಡಿದರೆ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಯೋಚಿಸಿ. ಶಿವಮೊಗ್ಗ ಜಿಲ್ಲೆಗೆ ಯಾರಾದರೂ ಬಂಡವಾಳ ಹೂಡಿಕೆದಾರರು ಬರುತ್ತಿದ್ದಾರಾ? ಕೊಡಗು ಭಾಗದ ಜನರು ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದ್ದು, ಪ್ರತಿ ವರ್ಷ ಮಳೆಕಾಲಕ್ಕೆ ಅವರ ಆಸ್ತಿಗಳು ನಾಶವಾಗುತ್ತಿವೆ. ಜನ ನರಳುತ್ತಿರುವಾಗ ಇವರು ಈ ರೀತಿ ಮಾಡಿದರೆ ಏನು ಮಾಡಬೇಕು. ಈ ಭಾಗದ ಅಭಿವೃದ್ಧಿ ಬಗ್ಗೆ ಸರಕಾರ ಚರ್ಚೆ ಮಾಡಲಿ. ಈ ವಿಚಾರವನ್ನು ವಿರೋಧ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಈ ಸರ್ಕಾರ ದಿನಬೆಳಗಾದರೆ ಭ್ರಷ್ಟಾಚಾರ ಮಾಡುತ್ತಿದ್ದು, ಹೈಕೋರ್ಟ್ ಕೂಡ ಇದನ್ನೇ ಹೇಳಿದೆ. ಇನ್ನು ಸರ್ಕಾರಿ ಶಾಲೆಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಈ ಬಗ್ಗೆ ಧ್ವನಿ ಎತ್ತಬಾರದೇ? ಈ ಸರ್ಕಾರ ಎಲ್ಲರಿಗೂ ರಕ್ಷಣೆ ನೀಡುವುದಾಗಿ ಪ್ರಮಾಣ ಮಾಡಿ, ಈಗ ಒಂದು ವರ್ಗಕ್ಕೆ ಪರಿಹಾರ ನೀಡಿ ಮತ್ತೊಂದು ವರ್ಗಕ್ಕೆ ನೀಡದೇ ಅವರನ್ನು ಪ್ರಚೋದನೆ ಮಾಡುತ್ತಿದೆ. ಆ ಮೂಲಕ ರಾಜ್ಯದ ಶಾಂತಿ, ಗೌರವವನ್ನು ಹರಾಜು ಹಾಕಲಾಗುತ್ತಿದೆ. ಇವರು ರಾಷ್ಟ್ರಗೀತೆ, ನಾಡಗೀತೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರ ತನ್ನ ಸಾಧನೆ ಮೇಲೆ ಮಾತನಾಡಬೇಕು. ನೀವು ಬೇಕಾದರೆ ಮೊಟ್ಟೆ ಅಥವಾ ಬೇರೆ ಏನಾದರೂ ಹೊಡೆಯಿರಿ. ಅದರ ಪರಿಣಾಮ ನಂತರ ಎದುರಿಸುವಿರಿ. ಆದರೆ ಮೊದಲು ಜನರನ್ನು ನೆಮ್ಮದಿಯಾಗಿ ಬದುಕಲು ಬಿಡಿ. ನಾವು ಪ್ರತಿಭಟನೆ ಮಾಡಿದಾಗ ಯಾವ ಸೆಕ್ಷನ್ ಗಳ ಮೇಲೆ ಪ್ರಕರಣ ದಾಖಲಿಸಿದ್ದೀರಿ? ಈಗ ಸರ್ಕಾರದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ನಮ್ಮ ಹಿರಿಯರು ರಾಜ್ಯಕ್ಕೆ ತಂದುಕೊಟ್ಟಿರುವ ಗೌರವವನ್ನು ನೀವೆಲ್ಲರೂ ನಾಶ ಮಾಡುತ್ತಿದ್ದೀರಿ. ಬೆಂಗಳೂರಿನಲ್ಲಿ ದೇಶ ಹಾಗೂ ವಿದೇಶಗಳಿಂದ ಬಂದಿರುವ ಜನರು ಕೆಲಸ ಮಾಡುತ್ತಿದ್ದಾರೆ. ವರ್ಷಕ್ಕೆ 11 ಲಕ್ಷ ಜನ ಉದ್ಯೋಗ, ಶಿಕ್ಷಣ, ಪ್ರವಾಸಕ್ಕಾಗಿ ಬರುತ್ತಿದ್ದಾರೆ. ನಮ್ಮಲ್ಲಿರುವ ಸಿರಿ ಸಂಪತ್ತನ್ನು ರಾಜಕೀಯಕ್ಕಾಗಿ ಹಾಳು ಮಾಡುತ್ತಿದ್ದೀರಿ. ಶಿವಮೊಗ್ಗದ ಉದ್ಯಮಿಗಳು ನನ್ನ ಬಳಿ ಬಂದು ಅಳಲು ತೋಡಿಕೊಂಡಿದ್ದಾರೆ’ ಎಂದು ತಿಳಿಸಿದರು.

ಆ. 26 ರಂದು ಕೊಡಗು ಎಸ್ಪಿ ಕಚೇರಿಗೆ ಮುತ್ತಿಗೆ ಹೋರಾಟ ಪಕ್ಷದ ವತಿಯಿಂದ ನಡೆಯುತ್ತದೆಯೇ ಎಂಬ ಪ್ರಶ್ನೆಗೆ, ‘ನಮಗೆ ಎಸ್ಪಿ ಮುಖ್ಯವಲ್ಲ. ಸಂವಿಧಾನಬದ್ಧವಾಗಿ ನೀಡಿರುವ ಕರ್ತವ್ಯಕ್ಕೆ ಸರ್ಕಾರ ಅಡ್ಡಿ ಮಾಡಲು ಮುಂದಾಗಿದೆ. ಎಸ್ಪಿ ಕೇವಲ ನೆಪ ಮಾತ್ರ. ಈ ಕಪ್ಪು ಬಾವುಟ ಪ್ರತಿಭಟನೆ ಸರ್ಕಾರದ ಪ್ರಾಯೋಜಿತದಿಂದ ಆಗಿದೆ. ಹೀಗಾಗಿ ಈ ಹೋರಾಟ ಸರ್ಕಾರದ ವಿರುದ್ಧವೇ ಹೊರತು, ಅಧಿಕಾರಿ ವಿರುದ್ಧ ಅಲ್ಲ. ನಿಮ್ಮಂತೆ ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ಎಲ್ಲ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸಿದರೆ ಪರಿಸ್ಥಿತಿ ಏನು? ಮೊಟ್ಟೆ ಹೊಡೆದವನನ್ನು ಹೀರೋ ರೀತಿ ಬಿಂಬಿಸುವ ಬದಲು ಜನರ ಸಂಕಷ್ಟಗಳತ್ತ ಗಮನಹರಿಸಿ. ರಾಜಕೀಯದಲ್ಲಿ ಯಾರೂ ಶಾಶ್ವತವಲ್ಲ. ನಿಮಗೆ ರಾಜ್ಯದ ಜನರ ಸೇವೆಗೆ ಅವಕಾಶ ಸಿಕ್ಕಿದ್ದು ನೀವು ಏನು ನೀಡಿದ್ದೀರಿ ಎಂಬುದು ಮುಖ್ಯ’ ಎಂದು ತಿಳಿಸಿದರು.

ಆ. 26 ರ ಹೋರಾಟಕ್ಕೆ ಶಾಸಕಾಂಗ ಪಕ್ಷದ ಕಚೇರಿಯಿಂದ ಶಾಸಕರು ಇದರಲ್ಲಿ ಭಾಗವಹಿಸಬೇಕು ಎಂಬ ಸಂದೇಶ ರವಾನೆಯಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಎಲ್ಲಿ ಅವರು ಪ್ರತಿಭಟನೆ ಮಾಡಿದರೋ, ಅಲ್ಲೇ ಅದಕ್ಕೆ ಧಿಕ್ಕಾರ ಕೂಗಬೇಕಾಗಿದೆ. ಮಹಾತ್ಮಾ ಗಾಂಧಿ, ನೆಹರೂ, ಸರ್ದಾರ್ ಪಟೇಲರು ನಮಗೆ ಕೊಟ್ಟಿರುವ ಮಾರ್ಗದರ್ಶನದಂತೆ ಹೋರಾಡುತ್ತೇವೆ’ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಮಾಂಸ ಸೇವಿಸಿ ದೇವಾಲಯಕ್ಕೆ ತೆರಳಿದ ವಿಚಾರ ಹಾಗೂ ಬಾಳೆ ಹೊನ್ನೂರು ಮಠದಲ್ಲಿ ಸ್ವಾಮೀಜಿ ಬಳಿ ನೀಡಿದ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈ ವಿಚಾರವಾಗಿ ನೀವು ಸಿದ್ದರಾಮಯ್ಯ ಅವರ ಬಳಿ ಮಾತನಾಡಬೇಕು. ಅವರು ಹಾಗೂ ಸ್ವಾಮೀಜಿಗಳ ನಡುವೆ ಆದ ಸಂಭಾಷಣೆ ವಿಚಾರ ನನಗೆ ತಿಳಿದಿಲ್ಲ. ಆ ಸಮಯದಲ್ಲಿ ನಾನು ಇರಲಿಲ್ಲ. ಈ ಬಗ್ಗೆ ನನಗೆ ಯಾರೂ ತಿಳಿಸಿಲ್ಲ. ಮಾಧ್ಯಮಗಳ ಮಾಹಿತಿ ಅಷ್ಟೇ ನನ್ನ ಬಳಿ ಇದೆ. ಮುಂದಿನ ದಿನಗಳಲ್ಲಿ ನಾವು ಸಭೆ ಕರೆದಾಗ ಈ ವಿಚಾರವಾಗಿ ಚರ್ಚೆ ಮಾಡುತ್ತೇವೆ. ಮೊದಲು ರಾಜ್ಯದ ಸ್ವಾಭಿಮಾನ, ಜನರ ಬದುಕಿನಲ್ಲಿ ದಿನನಿತ್ಯ ಆಗುತ್ತಿರುವ ನೋವು ತಪ್ಪಿಸಿ, ರಾಜ್ಯದಲ್ಲಿ ಶಾಂತಿ ಸ್ಥಾಪಿಸಲಿ. ಇದೆಲ್ಲದರ ವಿಚಾರವಾಗಿ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊರಬೇಕು’ ಎಂದು ತಿಳಿಸಿದರು.

Join Whatsapp