ಗ್ಯಾರಂಟಿ ಯೋಜನೆಗಳ ಅಪಸ್ವರ ನಿಲ್ಲಿಸಿ: ಸಚಿವರಿಗೆ ಭಂಡಾರಿ ತಾಕೀತು

Prasthutha|

ಬೆಂಗಳೂರು: ಸರಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಬಗ್ಗೆ ಸಚಿವರ ಅಪಸ್ವರಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, “ಯೋಜನೆಗಳ ವಿಚಾರದಲ್ಲಿ ಅನಗತ್ಯ ಗೊಂದಲಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು’ ಎಂದು ತಾಕೀತು ಮಾಡಿದ್ದಾರೆ.

- Advertisement -


ಸಚಿವರನ್ನು ಕೇಳಿ ಗ್ಯಾರಂಟಿ ಯೋಜನೆಗಳನ್ನು ಮಾಡಿಲ್ಲ. ಕಳೆದ ವಿಧಾನಸಭಾ ಚುನಾವಣೆ ವೇಳೆ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅಂದಿನ ವಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೆಲ್ಲರೂ ಸೇರಿ ಕೊರೊನಾದಿಂದ ತತ್ತರಿಸಿದ ಜನರ ಬದುಕಿಗೆ ಆಸರೆ ಆಗಬೇಕು ಎಂಬ ದೃಷ್ಟಿಯಿಂದ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲಾಗಿತ್ತು. ಅವುಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಹಾಗಾಗಿ ಗೊಂದಲದ ಹೇಳಿಕೆಗಳು ಸಲ್ಲದು’ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.


ಈಗಾಗಲೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುತ್ತಾರೆ. ಹೀಗಿದ್ದರೂ ಅನಾವಶ್ಯಕವಾಗಿ ಕೆಲವು ಸಚಿವರು ಮಾತನಾಡುತ್ತಿರುವುದು ಸರಿಯಲ್ಲ. ಅದೇನೇ ಇದ್ದರೂ ಮುಖ್ಯಮಂತ್ರಿಗಳು ಮತ್ತು ಪಕ್ಷದ ಅಧ್ಯಕ್ಷರ ಜತೆ ಚರ್ಚಿಸಿ ಹೇಳಿಕೆ ಕೊಡಬೇಕು ಎಂದು ಪತ್ರಿಕಾ ಪ್ರಕಟನೆೆಯಲ್ಲಿ ಮಂಜುನಾಥ ಭಂಡಾರಿ ಎಚ್ಚರಿಸಿದ್ದಾರೆ.



Join Whatsapp