ಬೀದರ್: ಕೇಂದ್ರದ ರಾಸಾಯನಿಕ, ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಭಗವಂತ ಖೂಬಾ ಅವರು ಹೊಂದಾಣಿ ರಾಜಕಾರಣದಲ್ಲಿ ಎಕ್ಸ್ಪರ್ಟ್ ಎಂದು ಮಾಜಿ ಸಚಿವ ಪ್ರಭು ಚೌಹಾಣ್ ವಾಗ್ದಾಳಿ ನಡೆಸಿದ್ದಾರೆ. ತನ್ನನ್ನು ಹತ್ಯೆ ಮಾಡಿ ಉಪ ಚುನಾವಣೆ ನಡೆಸುವ ಪ್ಲಾನ್ ಮಾಡುತ್ತಿದ್ದಾರೆ ಎಂದು ಪ್ರಭು ಚೌಹಾಣ್ ಅವರು ಭಗವಂತ ಖೂಬಾ ವಿರುದ್ಧ ಆರೋಪ ಮಾಡಿದ್ದರು. ಇದನ್ನು ಅಳ್ಳಗಳೆದಿದ್ದ ಖೂಬಾ ವಿರುದ್ಧ ಚೌಹಾಣ್ ಮತ್ತೆ ಗುಡುಗಿದ್ದಾರೆ. ಅಲ್ಲದೆ, ಖೂಬಾ ವಿರುದ್ಧ 200 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಹೇಳಿದ್ದಾರೆ.
ಖೂಬಾ ಅವರು ಸ್ವತಃ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಅವರು ಪಕ್ಷದ ವಿರುದ್ಧವಾಗಿ ಕೆಲಸ ಮಾಡಿದ್ದು ಬಹಿರಂಗವಾಗಿದೆ. ಹೀಗಿರುವಾಗ ನಾನು ಕಾಂಗ್ರೆಸ್ ನಾಯಕರ ಜೊತೆಗೆ ಸೇರಿಕೊಂಡು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದೇನೆ ಎಂದು ಆರೋಪಿಸಿರುವುದು ಗಮನಿಸಿದರೆ “ಉಲ್ಟಾ ಚೋರ್ ಕೋತ್ವಾಲ್ ಕೊ ಡಾಟೆ” ಎಂಬಂತಾಗಿದೆ. ಇತ್ತೀಚೆಗೆ ಭಗವಂತ ಖೂಬಾ ತಲೆಬುಡವಿಲ್ಲದ ಹೇಳಿಕೆ ನೀಡುತ್ತಿದ್ದಾರೆ. ಅವರ ಬಗ್ಗೆ ಎಲ್ಲೆಡೆಯಿಂದ ಬರುತ್ತಿರುವ ಅತೃಪ್ತಿ, ಅಸಮಾಧಗಳನ್ನು ಕಂಡು ಹತಾಶರಾಗಿ ಹೀಗೆಲ್ಲ ಮಾತನಾಡುತ್ತಿದ್ದಾರೆ ಎನಿಸುತ್ತದೆ ಎಂದರು.
ನಾನು ಮೂರು ದಶಕದಿಂದ ಬಿಜೆಪಿ ನಿಷ್ಠ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷವನ್ನೇ ನನ್ನ ತಾಯಿ ಎಂದು ಭಾವಿಸಿ ನಿಷ್ಟೆಯಿಂದ ದುಡಿಯುತ್ತಿದ್ದೇನೆ. ಜನರ ಸೇವೆ, ಸಮಾಜದ ಸೇವೆಗೆ ಸಮರ್ಪಿಸಿಕೊಂಡು ಹಗಲಿರುಳು ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಔರಾದ್ ವಿಧಾನಸಭೆ ಕ್ಷೇತ್ರದ ಜನರು ನನಗೆ ನಾಲ್ಕನೇ ಬಾರಿ ಆಶೀರ್ವಾದ ಮಾಡಿ ವಿಧಾನಸಭೆಗೆ ಕಳಿಸಿದ್ದಾರೆ ಎಂದರು.
ಪಕ್ಷದ ವರಿಷ್ಠರು ನನ್ನ ಸೇವೆಗೆ ಗುರುತಿಸಿ ಎರಡು ಬಾರಿ ಮಂತ್ರಿ ಸ್ಥಾನ ಸಹ ಕೊಟ್ಟಿದ್ದಾರೆ. ಕ್ಷೇತ್ರದ ಜನರ ಋಣ, ಪಕ್ಷದ ಋಣ ತೀರಿಸಲು ಕೊನೆಯುಸಿರು ಇರುವವರೆಗೂ ದುಡಿಯುವ ಸಂಕಲ್ಪ ಮಾಡಿ ಕೆಲಸ ಮಾಡುತ್ತಿದ್ದೇನೆ. ಆದರೆ ಸದಾ ಪಕ್ಷದವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿರುವ ಭಗವಂತ ಖೂಬಾ ಅವರು ನಾನು ಹೊಂದಾಣಿಕೆ ರಾಜಕಾರಣ ಮಾಡುತ್ತಿರುವೆ ಎಂದು ಹೇಳಿ ನನ್ನ ತೇಜೋವಧೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಚೌಹಾಣ್ ಆರೋಪಿಸಿದ್ದಾರೆ.
ಖೂಬಾ ಅವರ ಹೇಳಿಕೆ ನಾನು ಖಂಡಿಸುತ್ತೇನೆ. ಅವರಿಗೆ ದಮ್ ಇದ್ದರೆ ನಾನು ಹೊಂದಾಣಿಕೆ ರಾಜಕಾರಣ ಮಾಡಿರುವುದನ್ನು ಸಾಬೀತುಪಡಿಸಲಿ. ಖೂಬಾ ನನ್ನ ವಿರುದ್ಧ ಸುಳ್ಳು, ಅರ್ಥಹೀನ ಆರೋಪ ಮಾಡಿದ್ದಾರೆ. ಈ ಬಗ್ಗೆ ವರಿಷ್ಠರ ಜೊತೆಗೆ ಮಾತನಾಡುವೆ. ವರಿಷ್ಠರು ಒಪ್ಪಿಗೆ ನೀಡಿದರೆ ಖೂಬಾ ವಿರುದ್ಧ 200 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದರು.
ಭಗವಂತ ಖೂಬಾ ಅವರ ಹೇಳಿಕೆ ನೋಡಿದರೆ “ಬೇಲಿಯೇ ಎದ್ದು ಹೊಲ ಮೇಯ್ದಂತೆ” ಎಂಬ ಮಾತು ನೆನಪಿಗೆ ಬರುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಗೆದ್ದಿರುವ ಖೂಬಾ ಲಕ್ಕಿಮ್ಯಾನ್. ಅವರಿಗೆ ಪಕ್ಷ, ಸಂಘಟನೆ ಏನೂ ಗೊತ್ತಿಲ್ಲ. ಪಕ್ಷದ ಯಾವೊಬ್ಬ ಕಾರ್ಯಕರ್ತರಿಗೂ ಬೆಳೆಸಿಲ್ಲ. ಏನಿದ್ದರೂ ಅವರ ಪರಿವಾರ ಬೆಳೆಸುವ ಕೆಲಸ ಮಾಡಿದ್ದಾರೆ ಎಂದು ಚೌಹಾಣ್ ವಾಗ್ದಾಳಿ ನಡೆಸಿದರು.
ಇಲಾಖೆಗೊಬ್ಬ ಗುತ್ತಿಗೆದಾರರನ್ನು ತಮ್ಮ ಪರಿವಾರದವರಿಗೆ ನಿಯೋಜಿಸಿ ಹಣ ಗಳಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡುತ್ತ ಸ್ವತಃ ಕಾಂಗ್ರೆಸ್ ಇತರರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ತಾನು ತಪ್ಪು ಮಾಡಿ ಮತ್ತೊಬ್ಬರ ಮೇಲೆ ಆರೋಪ ಹೊರಿಸುತ್ತಿರುವುದು ಸಹಿಸಲಾಗದು ಎಂದು ಎಚ್ಚರಿಕೆ ನೀಡುತ್ತೇನೆ ಎಂದರು.
ಖೂಬಾ ಅವರನ್ನು ರಾಜಕೀಯಕ್ಕೆ ಕರೆತಂದವನು ನಾನು ಎಂದ ಚೌಹಾಣ್
ಭಗವಂತ ಖೂಬಾಗೆ ರಾಜಕೀಯಕ್ಕೆ ಕರೆತಂದು ಎಲ್ಲರಿಗೂ ಪರಿಚಯಿಸಿದ್ದವನೇ ನಾನು. 2008 ರಲ್ಲಿ ನಾನು ಮೊದಲ ಬಾರಿ ಔರಾದ್ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಖೂಬಾ ಅವರಿಗೆ ಕ್ಷೇತ್ರದ ಚುನಾವಣೆ ಉಸ್ತುವಾರಿ ಮಾಡಲಾಯಿತು. ನಂತರ ಇತರೆ ಜವಾಬ್ದಾರಿ ಕೊಡಲಾಯಿತು. 2010 ರಲ್ಲಿ ಸುಭಾಷ ಕಲ್ಲೂರ್ ಜಿಲ್ಲಾ ಅಧ್ಯಕ್ಷರಿದ್ದಾಗ ನಾನೇ ಖೂಬಾ ಅವರಿಗೆ ಜಿಲ್ಲಾ ಉಪಾಧ್ಯಕ್ಷ ಮಾಡಿಸಿದ್ದೇನೆ. ಇನ್ನು 2014 ರಲ್ಲಿ ಲೋಕಸಭೆ ಚುನಾವಣೆ ವೇಳೆ ಇವರಿಗೆ ಬಿಜೆಪಿ ಟಿಕೆಟ್ ಕೊಡುವಂತೆ ವರಿಷ್ಠರ ಮೇಲೆ ಒತ್ತಡ ಹೇರಿದ ಮುಂಚೂಣಿಯಲ್ಲಿ ನಾನೇ ಇದ್ದೇನೆ ಎಂದರು.
ಖೂಬಾಗೆ ಟಿಕೆಟ್ ಕೊಡದಿದ್ದರೆ ನಾನು ವಿಷ ಸೇವಿಸುವೆ ಎಂದು ವರಿಷ್ಠರಿಗೆ ಹೇಳಿದ್ದೇನೆ. ಖೂಬಾ ಅವರಿಗೆ ಟಿಕೆಟ್ ಸಿಕ್ಕಿದ ನಂತರ ಅವರ ಗೆಲುವಿಗಾಗಿ ತನು-ಮನ-ಧನದಿಂದ ದುಡಿದಿದ್ದೇನೆ. ಆದರೆ ಗೆದ್ದ ಬಳಿಕ ಭಗವಂತ ಖೂಬಾ ಅಧಿಕಾರದ ದರ್ಪ, ಅಹಂಕಾರದಲ್ಲಿ ನನ್ನ ವಿರುದ್ಧವೇ ಕೆಲಸ ಮಾಡಲು ಆರಂಭಿಸಿದ್ದಾರೆ. ಆರೇಳು ವರ್ಷಗಳಿಂದ ನನಗೆ ನನಗೆ ಎಲ್ಲಿಲ್ಲದ ಟಾರ್ಚರ್ ಕೊಡುತ್ತಿದ್ದಾರೆ. ಇವರಿಗೆ ಪಕ್ಷ, ಪಕ್ಷದ ಕಾರ್ಯಕರ್ತರು, ನಾಯಕರ ಬಗ್ಗೆ ಕಿಂಚಿತ್ತು ಕಾಳಜಿ, ಕಳಕಳಿ ಇಲ್ಲ ಎಂಬುದಕ್ಕೆ ನಾನೇ ಉದಾಹರಣೆ ಆಗಿದ್ದೇನೆ ಎಂದರು.