ಮುಂಬೈ: ಮಹಿಳೆಯೊಬ್ಬರು ಅತ್ಯಂತ ವಿಶಿಷ್ಟವಾದ ಸೈಬರ್ ವಂಚನೆಗೆ ಬಲಿಯಾಗಿದ ಘಟನೆ ನಡೆದಿದ್ದು, ನಾಗರಿಕರಿಗೆ ಎಚ್ಚರಿಕೆಯ ಕರೆಘಂಟೆ ರವಾನೆಯಾಗಿದೆ. ಮಹಿಳೆಯೊಬ್ಬರು ಜನಪ್ರಿಯ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅಮೆಝಾನ್‌ನಿಂದ ಆರ್ಡರ್ ಮಾಡಿ 1.20 ಲಕ್ಷ ರೂಪಾಯಿ ವಂಚನೆಗೆ ಬಲಿಯಾಗಿದ್ದಾರೆ.
ಮುಂಬೈನ ಮಲಾಡ್ ವೆಸ್ಟ್‌ನ ನಿವಾಸಿ 40 ವರ್ಷದ ಮೇಘಾ ಎಂಬವರು ಅಮೆಝಾನ್‌ನಿಂದ ರೂ.15,000 ಮೌಲ್ಯದ ಕುರ್ಚಿಯನ್ನು ಆರ್ಡರ್ ಮಾಡಿದ್ದರು. ನಿರೀಕ್ಷಿತ ಸಮಯದಲ್ಲಿ ಪಾರ್ಸೆಲ್ ಅವರಿಗೆ ತಲುಪಲಿರಲಿಲ್ಲ. ಟ್ರ್ಯಾಕಿಂಗ್ ವಿವರಗಳನ್ನು ಪರಿಶೀಲಿಸಿ ಸಿಕ್ಕ ವಿವರಗಳನ್ನ ಬಳಸಿಕೊಂಡು ಪಾರ್ಸೆಲ್ ಕಂಪನಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಬಳಿಕ ಅವರಿಗೆ ಕಾಲ್ ಒಂದು ಬರುತ್ತದೆ. ತಾನು ಡೆಲಿವರಿ ಕಂಪನಿಯ ಉದ್ಯೋಗಿ ಆತ ಪರಿಚಯಿಸಿಕೊಳ್ಳುತ್ತಾನೆ. ಆ ವ್ಯಕ್ತಿಯೊಂದಿಗೆ ಮಹಿಳೆ ಮಾತನಾಡಿದ್ದಾರೆ. ವಾಸ್ತವವಾಗಿ ವ್ಯಕ್ತಿಯು ವಂಚಕನಾಗಿದ್ದನು.
ಕಾಲ್ ಮಾಡಿದ ವಂಚಕ ನಿಮ್ಮ ತಪ್ಪು ವಿಳಾಸ ಬಂದಿದೆ ಎಂದು ಹೇಳಿ ಲಿಂಕ್ ಒಂದನ್ನು ನೀಡಿ ಅದರಲ್ಲಿ ಸರಿಯಾದ ವಿಳಾಸವನ್ನಯ ಸಲ್ಲಿಸುವಂತೆ ಹೇಳಿದ್ದಾನೆ. ಮೇಘಾ ಆ ಲಿಂಕನ್ನು ತೆರೆದು ಕೇಳಿದ ಮಾಹಿತಿ ಟೈಪ್ ಮಾಡ್ತಾ ಹೋಗುತ್ತಾರೆ. ಅದರಲ್ಲಿ UPI ಪಿನ್ ಅನ್ನು ಕೇಳಲಾಗಿದ್ದು ಆಕೆ ಅದನ್ನೂ ನೀಡಿದ್ದಾಳೆ.
ವಂಚಕ ಕೇಳಿದ ವಿವರಗಳನ್ನು ಸಲ್ಲಿಸಿದ ತಕ್ಷಣ ಆಕೆಯ ಬ್ಯಾಂಕ್ ಖಾತೆಯಿಂದ 10 ಸಾವಿರ ರೂ. ಕಡಿತವಾಗಿದೆ. 2 ಗಂಟೆಗಳ ನಂತರ ಪಾರ್ಸೆಲ್ ಮಹಿಳೆಯನ್ನು ತಲುಪಿದೆ. ಬಳಿಕ ಆಕೆಯ ಬ್ಯಾಂಕ್ ಖಾತೆಯಿಂದ 5 ಸಾವಿರ ರೂಪಾಯಿ ಕಡಿತಗೊಳಿಸಲಾಗಿದೆ.
ಆದರೆ ಮೂರು ದಿನಗಳ ಬಳಿಕ ಆಕೆಯ ಬ್ಯಾಂಕ್ ಖಾತೆಯಿಂದ 90 ಸಾವಿರ ರೂಪಾಯಿ ಕಡಿತಗೊಳಿಸಲಾಗಿದೆ. ಇದಾದ ನಂತರ ಮಹಿಳೆ ತಕ್ಷಣವೇ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿದ್ದಾಳೆ. ಈ ಅವಧಿಯಲ್ಲಿ ಆಕೆಯ ಬ್ಯಾಂಕ್ ಖಾತೆಯಿಂದ ಆಕೆಯ ಅನುಮತಿಯಿಲ್ಲದೆ ಒಟ್ಟು 1,19,998 ರೂಪಾಯಿ ಕಡಿತಗೊಳಿಸಲಾಗಿದೆ. ಈ ಬಗ್ಗೆ ಸಂತ್ರಸ್ತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.