ಬೆಂಗಳೂರು: ವಿದ್ಯುತ್ ಪರಿವರ್ತಕಗಳ (ಟಿಸಿ) ನಿರ್ವಹಣೆ ಕಾರ್ಯದ ಮುಂದುವರಿದ ಅಭಿಯಾನದಲ್ಲಿ ಐದು ದಿನಗಳಲ್ಲಿ ಎಲ್ಲ 536 ಸೆಕ್ಷನ್ ಗಳಲ್ಲಿ 3343 ಟಿಸಿಗಳ ನಿರ್ವಹಣೆ ಮಾಡಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ತಾಂತ್ರಿಕ ಸಮಸ್ಯೆ ಉಂಟಾಗಿರುವ ಎಲ್ಲ ಟಿಸಿಗಳಿಗೆ ಶಾಶ್ವತ ಕಾಯಕಲ್ಪ ಒದಗಿಸಲು ಬೆಸ್ಕಾಂ ಮುಂದಾಗಿದ್ದು ಈ ಅಭಿಯಾನವನ್ನು ಇಂಧನ ಸಚಿವ ವಿ. ಸುನಿಲ್ ಕುಮಾರ್ ಸೂಚನೆ ಮೇರೆಗೆ ಬೆಸ್ಕಾಂ ಮೇ 5 ರಂದು ಕೈಗೊಂಡಿತ್ತು. 15 ದಿನಗಳ ಈ ಅಭಿಯಾನದಲ್ಲಿ ತಾಂತ್ರಿಕ ಸಮಸ್ಯೆ ಎದುರಿಸತ್ತಿರುವ ಹಾಗು ಸುರಕ್ಷಿತವಲ್ಲದ ಜನ ನಿಬಿಢ ಪ್ರದೇಶಗಳಲ್ಲಿರುವ ಟ್ರಾನ್ಸ್ ಫಾರ್ಮರ್ ಗಳ ಸ್ಥಳಾಂತರ ಮಾಡುವುದು ಹಾಗು ಅದನ್ನು ಎತ್ತರಿಸುವುದು ಸೇರಿದಂತೆ ಟಿಸಿಗಳ ಸಮಗ್ರ ನಿರ್ವಹಣೆಗೆ ಕ್ರಮಕೊಳ್ಳಲಾಗಿದೆ ಎಂದು ಬೆಸ್ಕಾಂ ಆಡಳಿತ ನಿರ್ದೇಶಕ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಬೆಸ್ಕಾಂನ ಬೆಂಗಳೂರು ನಗರ ಜಿಲ್ಲೆಯಲ್ಲಿ 1233 ಟಿಸಿಗಳ ನಿರ್ವಹಣೆ ಮಾಡಲಾಗಿದ್ದು, ತುಮಕೂರು ಜಿಲ್ಲೆಯಲ್ಲಿ 486, ದಾವಣೆಗೆರೆ ಜಿಲ್ಲೆಯಲ್ಲಿ 455, ಚಿತ್ರದುರ್ಗ ಜಿಲ್ಲೆಯಲ್ಲಿ 257 ಟಿಸಿಗಳ ನಿರ್ವಹಣೆ ಮಾಡಲಾಗಿದೆ ಎಂದು ಬೆಸ್ಕಾಂ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಿರ್ವಹಣೆ ಕಾರ್ಯ ಉದ್ಘಾಟನೆಗೊಂಡ ಮೊದಲ ದಿನದಲ್ಲಿ 542, ಮೇ6 ರಂದು, 615, ಮೇ 7 ರಂದು 777, ಮೇ 8 ರಂದು 700 ಹಾಗು ಮೇ 9 ರಂದು 709 ಟಿಸಿಗಳ ನಿರ್ಹಹಣೆ ಮಾಡಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ನಿರ್ವಹಿಸಿರುವ 1233 ಟಿಸಿಗಳ ಪೈಕಿ ಪಶ್ಚಿಮ ವೃತ್ತದಲ್ಲಿ 312, ದಕ್ಷಿಣ ವೃತ್ತದಲ್ಲಿ 226, ಪೂರ್ವ ವೃತ್ತದಲ್ಲಿ 260 ಹಾಗು ಉತ್ತರ ವೃತ್ತದಲ್ಲಿ 346 ಟಿಸಿಗಳ ನಿರ್ವಹಣೆ ಕಾರ್ಯ ಪೂರ್ಣ ಗೊಳಿಸಲಾಗಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಅದೇ ರೀತಿ ಬೆಂಗಳೂರು ಗ್ರಾಮೀಣ ಜಿಲ್ಲೆಯಲ್ಲಿ 182, ರಾಮನಗರ ಜಿ್ಲೆಯಲ್ಲಿ 249, ಕೋಲಾರ ಜಿಲ್ಲೆಯಲ್ಲಿ 220, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 261 ಟಿಸಿಗಳ ನಿರ್ವಹಣೆ ಕಾರ್ಯ ಮುಗಿದಿದೆ.
ಇಂಧನ ಇಲಾಖೆ ಕೈಗೆತ್ತಿಕೊಂಡಿರುವ ಟಿಸಿ ನಿರ್ವಹಣೆ ಅಭಿಯಾನಕ್ಕೆ ಮೇ 5 ರಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಚಾಲನೆ ನೀಡಿದ್ದು, ಟಿಸಿ ಗಳ ನಿರ್ವಹಣೆ ಕಾರ್ಯವನ್ನು ಬೆಸ್ಕಾಂ ಏಕಕಾಲದಲ್ಲಿ 8 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಆರಂಭಿಸಿದೆ.
ಬೆಸ್ಕಾಂ ನಿರ್ದೇಶಕ ರಾಜೇಂದ್ರ ಚೋಳನ್ ಅವರು ಕ್ವೀನ್ಸ್ ರಸ್ತೆಯ ಕೆ.ಪಿ.ಸಿ.ಸಿ. ಕಛೇರಿ ಸಮೀಪ ಪಾದಚಾರಿ ಮಾರ್ಗದಲ್ಲಿನ ಪರಿವರ್ತಕದ ನಿರ್ವಹಣೆಗೆ ಮೇ 5 ರಂದು ಚಾಲನೆ ನೀಡಿದರು. ಇಂಧನ ಸಚಿವರು ಸೂಚಿಸಿರುವ ಅಭಿಯಾನದಿಂದ ಟಿಸಿ ಆಗಾಗ್ಗೆ
ಕೆಡುವುದನ್ನು ಕಡಿಮೆ ಮಾಡುವುದಲ್ಲದೇ, ವಿದ್ಯುತ್ ಅವಘಡಗಳನ್ನು ಕಡಿಮೆ ಮಾಡಲು ಅನುಕೂಲವಾಗುತ್ತದೆ ಅಲ್ಲದೆ ಬೆವಿಕಂಗೆ ಆರ್ಥಿಕ ನಷ್ಟವನ್ನು ತಪ್ಪಿಸಬಹುದಾಗಿರುತ್ತದೆ. ಇದರಿಂದಾಗಿ ಗ್ರಾಹಕರಿಗೆ ನಿರಂತರ ಹಾಗೂ ಉತ್ತಮ ಗುಣಮಟ್ಟದ ವಿದ್ಯುತ್ ನೀಡಲು ಅನುಕೂಲವಾಗುತ್ತದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.