ಜೆರುಸಲೇಂ: ಇಸ್ರೇಲ್ ನ ನೂತನ ಪ್ರಧಾನಿಯಾಗಿ ಲಿಕುಡ್ ಪಕ್ಷದ ನಾಯಕ ಬೆಂಜಮಿನ್ ನೆಥನ್ಯಾಹು ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
73 ವರ್ಷದ ನೆಥನ್ಯಾಹು ಅವರು 1996ರಿಂದ 1999ರ ನಡುವಿನ ಅವಧಿ ಹಾಗೂ 2009ರಿಂದ 2021ರ ಅವಧಿಯಲ್ಲಿ ಇಸ್ರೇಲ್ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಗುರುವಾರ ಇಸ್ರೇಲ್ ನ ಸಂಸತ್ತು ಅಥವಾ ನೆನೆಸ್ಸೆಟ್ ನೆಥನ್ಯಾಹು ಅವರ ಸರಕಾರದ ಪರ ವಿಶ್ವಾಸ ವ್ಯಕ್ತಪಡಿಸಿದ ಬಳಿಕ ನೆಥನ್ಯಾಹು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ಇಸ್ರೇಲ್ ಇತಿಹಾಸದಲ್ಲೇ ಕಟ್ಟಾ ಬಲಪಂಥೀಯ ಸರಕಾರದ ನೇತೃತ್ವವನ್ನು 73 ವರ್ಷದ ನೆಥನ್ಯಾಹು ವಹಿಸಿದಂತಾಗಿದೆ.
120 ಸದಸ್ಯಬಲದ ಸಂಸತ್ತಿನಲ್ಲಿ 63 ಸದಸ್ಯರು ನೆಥನ್ಯಾಹು ಸರಕಾರದ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ದಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ನೆಥನ್ಯಾಹು ಅವರು ಇಸ್ರೇಲ್ ನ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿ ಎಂದು ಇಸ್ರೇಲ್ ಪತ್ರಿಕೆ ವರದಿ ಮಾಡಿದ್ದು, ಇದು ಅವರ ಆರನೇ ಸರ್ಕಾರವಾಗಲಿದೆ.