ಬೆಂಗಳೂರು: ಏರೋ ಇಂಡಿಯಾ ವತಿಯಿಂದ ಯಲಹಂಕದಲ್ಲಿ ನಡೆಯುವ 2025ನೇ ಸಾಲಿನ ಏರ್ ಶೋಗೆ ಸಿದ್ಧತೆ ಭರದಿಂದ ಸಾಗಿದೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಏರ್ ಶೋಗೆ ಕೌಂಟ್ ದಿನಗಣನೆ ಆರಂಭವಾಗಿದೆ.
ಫೆಬ್ರವರಿ 10 ರಿಂದ 14ರವರೆಗೆ ನಡೆಯುವ ಅಂತರರಾಷ್ಟ್ರೀಯ ಏರ್ ಶೋವನ್ನು ನೋಡಲು ಬೆಂಗಳೂರು ಜನ ಕಾತುರರಾಗಿದ್ದಾರೆ. ಏರ್ ಶೋಗೆ ಸಕಲ ತಯಾರಿ ನಡೆಯುತ್ತಿದೆ. ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ ಕಣ್ತುಂಬಿಕೊಳ್ಳೋಕೆ ಸಿಟಿಮಂದಿ ಕಾತುರರಾಗಿದ್ದಾರೆ.
ಅಂತರರಾಷ್ಟ್ರೀಯ ಏರ್ ಶೋ ನಡೆಯುವ ಯಲಹಂಕ ವಾಯುನೆಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಂಸ ಮಾರಾಟವನ್ನ ನಿಷೇಧ ಮಾಡಲಾಗುತ್ತೆ. ಅದರಂತೆ, ಈ ಬಾರಿ ಕೂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಲಹಂಕ ವಲಯದ ಏರ್ಪೋರ್ಸ್ ಸ್ಟೇಷನ್ನಿಂದ 13 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾಂಸ ಮಾರಾಟದ ಉದ್ಯಮಗಳನ್ನು 26 ದಿನ ಮುಚ್ಚುವಂತೆ ಆದೇಶ ಹೊರಡಿಸಿದೆ.
ಮಾಂಸ ಮಾರಾಟ ನಿಷೇಧ ಏಕೆ?
ಯಲಹಂಕದ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಂಸ ಮಾರಾಟ ಮಾಡುವುದರಿಂದ ಪಕ್ಷಿಗಳ ಹಾರಾಟ ಹೆಚ್ಚಾಗುತ್ತೆ. ಇದರಿಂದ ಏರ್ ಶೋ ಸಂದರ್ಭದಲ್ಲಿ ಯುದ್ಧ ವಿಮಾನಗಳ ಹಾರಾಟಕ್ಕೆ ಸಮಸ್ಯೆಯಾಗುತ್ತೆ ಎಂದು ಪಾಲಿಕೆ ಈ ಆದೇಶ ಹೊರಡಿಸಿದೆ. ಪಾಲಿಕೆಯ ಆದೇಶಕ್ಕೆ ಮಾಂಸ ಮಾರಾಟ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.