ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಇದುವರೆಗೆ ಸಂಭವಿಸಿದ ಅಪಘಾತಗಳೆಷ್ಟು? ಇಲ್ಲಿದೆ ಅಂಕಿ-ಅಂಶ

Prasthutha|

ಮಂಡ್ಯ : ಬೆಂಗಳೂರು ಮತ್ತು ಮೈಸೂರು ನಗರವನ್ನು ಸಂಪರ್ಕಿಸುವ ಎಕ್ಸ್‌ಪ್ರೆಸ್ ವೇ ಸಾವಿನ ಹೆದ್ದಾರಿಯಾಗಿ ಬದಲಾಗುತ್ತಿದೆ. ಈ ವರ್ಷದ ಜನವರಿಯಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ 132 ಅಪಘಾತಗಳು ಸಂಭವಿಸಿದ್ದು, ಮಾರ್ಚ್ 12 ರಿಂದ ಅಂದ್ರೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಉದ್ಘಾಟಿಸಿದ ದಿನದಿಂದ 100 ಅಪಘಾತಗಳು ಸಂಭವಿಸಿವೆ.

- Advertisement -

ದಿನೇ ದಿನೇ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಕರ್ನಾಟಕ ಪೊಲೀಸರು ಮತ್ತು ಹೆದ್ದಾರಿ ಅಧಿಕಾರಿಗಳು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಮತ್ತು ಸಾವಿನ ಅಪಾಯವನ್ನು ಕಡಿಮೆ ಮಾಡಲು ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದ್ದಾರೆ. ಚನ್ನಪಟ್ಟಣ-ಮಂಡ್ಯ ದಾರಿ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಇಲ್ಲಿ ಜೂನ್ 30 ರವರೆಗೆ ಸುಮಾರು 172 ಅಪಘಾತಗಳು ಸಂಭವಿಸಿದ್ದು 49 ಸಾವುಗಳಾಗಿವೆ ಎಂದು ವರದಿಯಾಗಿದೆ.

ಎಕ್ಸ್‌ಪ್ರೆಸ್‌ವೇನಲ್ಲಿ ಅಲ್ಪಾವಧಿಯಲ್ಲಿಯೇ ಹಲವಾರು ಸಾವು-ನೋವುಗಳು ಸಂಭವಿಸಿದ್ದು ಪೊಲೀಸರು ಈ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಖುದ್ದು ಎಡಿಜಿಪಿ ಅಲೋಕ್ ಕುಮಾರ್ ಅವರು ಬೆಂಗಳೂರು ದಕ್ಷಿಣ ತಾಲೂಕಿನ‌ ಬಾಬಾಸಾಹೇಬರ ಪಾಳ್ಯ ಬಳಿ ಹೈವೇಯನ್ನು ಪರಿಶೀಲಿಸಿ ಕ್ರಮಕ್ಕೆ ಸೂಚಿಸಿದ್ದಾರೆ.

- Advertisement -

ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹೆಚ್ಚಿನ ಗಸ್ತು ವಾಹನಗಳನ್ನು ನಿಯೋಜಿಸುವುದು, ಟ್ರಾಫಿಕ್ ಉಲ್ಲಂಘನೆ ಪತ್ತೆ ವ್ಯವಸ್ಥೆಗಳನ್ನು ಸ್ಥಾಪಿಸುವುದು, ಸೈನ್‌ಬೋರ್ಡ್‌ಗಳನ್ನು ಹೆಚ್ಚಿಸುವುದು, ಸ್ಪೀಡ್ ರಾಡಾರ್ ಗನ್‌ಗಳು ಮತ್ತು ಇತರ ಸಾಧನಗಳೊಂದಿಗೆ ಗಸ್ತು ಅಧಿಕಾರಿಗಳನ್ನು ಸಜ್ಜುಗೊಳಿಸುವುದು ಸೇರಿದಂತೆ ಅಪಘಾತಗಳು ಮತ್ತು ಸಾವುಗಳನ್ನು ಕಡಿಮೆ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಕರ್ನಾಟಕದ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಎಡಿಜಿಪಿ ಅಲೋಕ್ ಕುಮಾರ್ ಅವರು ಎಕ್ಸ್‌ಪ್ರೆಸ್‌ವೇಯಲ್ಲಿ ರಸ್ತೆ ಬಳಕೆದಾರರ ಸುರಕ್ಷತೆಗೆ ಅಡ್ಡಿಯುಂಟು ಮಾಡುವಂತಹ ಸಮಸ್ಯೆಗಳಿರುವುದನ್ನು ಒಪ್ಪಿಕೊಂಡಿದ್ದಾರೆ. ಇಲ್ಲಿ ಕೆಲವು ಸಮಸ್ಯೆಗಳಿವೆ, ಯಾವುದೂ ಇಲ್ಲ ಎಂದು ನಾವು ಹೇಳಲು ಸಾಧ್ಯವಿಲ್ಲ. ಇಲ್ಲಿರುವ ಸೂಚನೆಗಳನ್ನು ಹೊಂದಿರುವ ಫಲಕಗಳು ಸಾಕಾಗುವುದಿಲ್ಲ. ಈ ಎಕ್ಸ್‌ಪ್ರೆಸ್‌ವೇಯಂತಹ ಹೆಚ್ಚಿನ ವೇಗದ ಹೆದ್ದಾರಿಗಳಲ್ಲಿ ನಿರಂತರವಾಗಿ ಸೂಚನಾ ಫಲಕಗಳನ್ನು ಹಾಕಬೇಕು ಎಂದರು.

ಹೆಚ್ಚಿನ ಅಪಘಾತಗಳ ಅಪಾಯವು ರಸ್ತೆಯ ಸ್ಥಿತಿ ಮತ್ತು ಚಾಲಕರ ದೋಷಗಳ ಸಂಯೋಜನೆಯಾಗಿದೆ. ರಸ್ತೆಯ ಏರಿಳಿತವು ರಸ್ತೆ ಬಳಕೆದಾರರ ನಿರ್ಲಕ್ಷ್ಯದೊಂದಿಗೆ ಗಂಭೀರವಾದ ಸುರಕ್ಷತೆಯ ಅಪಾಯವನ್ನು ಉಂಟುಮಾಡಬಹುದು ಎಂದು ಎಡಿಜಿಪಿ ಅಲೋಕ್ ಕುಮಾರ್ ವಿವರಿಸಿದರು. ಹಾಗೂ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಮಾತ್ರವೇ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸಿವೆ ಅಂತಲ್ಲ. ದೇಶದಲ್ಲಿ ಈ ರೀತಿಯ ಹೆದ್ದಾರಿಗಳು ಅನೇಕ ಇವೆ ಎಂದು ಅಲೋಕ್ ಕುಮಾರ್ ಒತ್ತಿ ಹೇಳಿದರು.

ಇತರ ಎಕ್ಸ್‌ಪ್ರೆಸ್‌ವೇಗಳು, ನಿರ್ದಿಷ್ಟವಾಗಿ ಮುಂಬೈ-ಪುಣೆ, ಹೆಚ್ಚಿನ ಪ್ರಮಾಣದ ಅಪಘಾತಗಳನ್ನು ವರದಿ ಮಾಡಿದೆ. ಆರಂಭದಲ್ಲಿ ಜನರು ಹೆಚ್ಚು ಜಾಗರೂಕರಾಗಿರುವುದಿಲ್ಲ. ಕಾಲ ಬದಲಾದಂತೆ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡುತ್ತಾರೆ. ಆಗ ಅಪಘಾತ ಕೂಡ ಕಡಿಮೆಯಾಗುತ್ತದೆ ಎಂದರು.

ಕಳೆದ ಆರು ತಿಂಗಳಲ್ಲಿ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ 48 ಅಪಘಾತಗಳಲ್ಲಿ 58 ಜನರು ಸಾವನ್ನಪ್ಪಿದ್ರೆ, ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 64 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಐದೂವರೆ ತಿಂಗಳಲ್ಲಿ 122 ಜನರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಹಲವು ದೂರುಗಳು, ಜನಪ್ರತಿನಿಧಿಗಳು ಸಹಾ ಸಭೆಗಳಲ್ಲಿ ಪ್ರಸ್ತಾಪ ಮಾಡಿದ್ರು. ಅಲ್ಲದೆ ಟಿವಿ9 ಕೂಡ ವರದಿ ಬಿತ್ತರ ಮಾಡಿತ್ತು. ಈ ನಿಟ್ಟಿನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲನೆ ನಡೆಸಿದ್ರು. ಹೆದ್ದಾರಿ ಪರಿಶೀಲನೆ ನಂತರ ಎನ್ ಹೆಚ್ ಎ ಐ, ಡಿಬಿಎಲ್ ಕಂಪನಿ, ಆರ್ ಟಿಓ, ಪಿಬ್ಲೂಡಿ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಹಲವು ಸೂಚನೆಗಳನ್ನ ಕೊಟ್ಟರು. ಇನ್ನು ಕೆಲವೇ ತಿಂಗಳಲ್ಲಿ ಅಪಘಾತ ಸಂಖ್ಯೆ ಶೇ 25ರಷ್ಟು ಕಡಿಮೆ ಮಾಡುವುದಾಗಿ ಕೂಡ ತಿಳಿಸಿದ್ರು. ಇನ್ನು ಈ ಬಗ್ಗೆ ಮಾತನಾಡಿದ ಎನ್ ಹೆಚ್ ಎ ಐ ಪಿಡಿ, ಹಲವು ಸೂಚನೆಗಳನ್ನ ಪೊಲೀಸ್ ಅಧಿಕಾರಿಗಳು ನೀಡಿದ್ದಾರೆ. ಈ ಬಗ್ಗೆ ನಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರವೇ ಸಮಸ್ಯೆ ಬಗೆಹರಿಸುತ್ತೇವೆ ಎಂದರು.

Join Whatsapp