ಬೆಂಗಳೂರು: 40 ಪೈಸೆ ಅಧಿಕ ಶುಲ್ಕ ವಿಧಿಸಿದ್ದ ರೆಸ್ಟೋರೆಂಟ್ ವಿರುದ್ಧ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದ ಹಿರಿಯ ನಾಗರಿಕರೋರ್ವರಿಗೆ 4000 ರೂಪಾಯಿ ದಂಡ ವಿಧಿಸಿದ ಅಪರೂಪದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ದೂರುದಾರರು ವೈಯಕ್ತಿಕ ಪ್ರಚಾರಕ್ಕಾಗಿ ಪ್ರಕರಣವನ್ನು ಬಳಸಿಕೊಂಡಿದ್ದಾರೆ ಮತ್ತು ನ್ಯಾಯಾಲಯ, ರೆಸ್ಟೋರೆಂಟ್ ಮತ್ತು ಅದರ ಪ್ರತಿನಿಧಿಗಳ ಸಮಯವನ್ನು ವ್ಯರ್ಥ ಮಾಡಿರುವುದರಿಂದ ದೂರುದಾರರು ಯಾವುದೇ ಪರಿಹಾರಕ್ಕೆ ಅರ್ಹರಲ್ಲ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಘಟನೆಯ ಹಿನ್ನೆಲೆ
2019ರ ಮೇ ತಿಂಗಳಲ್ಲಿ ಬೆಂಗಳೂರಿನ ಸೆಂಟ್ರಲ್ ಸ್ಟ್ರೀಟ್’ನಲ್ಲಿರುವ ಎಂಪೈರ್ ರೆಸ್ಟೋರೆಂಟ್’ಗೆ ಭೇಟಿ ನೀಡಿದ್ದ ಮೂರ್ತಿ ಎಂಬುವವರು ಆಹಾರವನ್ನು ಪಾರ್ಸೆಲ್ ಮಾಡುವಂತೆ ತಿಳಿಸಿದ್ದರು. ಈ ವೇಳೆ ರೆಸ್ಟೋರೆಂಟ್ ಸಿಬ್ಬಂದಿ ಮೂರ್ತಿಗೆ 265 ರೂಪಾಯಿಗಳ ಬಿಲ್ ನೀಡಿದ್ದರು. ಆದರೆ ಮೂಲ ಬಿಲ್ 264.60 ರೂಪಾಯಿ ಆಗಿದ್ದು, 40 ಪೈಸೆ ಹೆಚ್ಚುವರಿ ನಮೂದಿಸಿದ್ದನ್ನು ಮೂರ್ತಿ ಸಿಬ್ಬಂದಿ ಬಳಿ ಪ್ರಶ್ನಿಸಿದ್ದರು. ಆದರೆ ಸಿಬ್ಬಂದಿ ಉತ್ತರದಿಂದ ಸಮಾಧಾನಗೊಳ್ಳದ ಮೂರ್ತಿ ರೆಸ್ಟೋರೆಂಟ್ ವಿರುದ್ಧ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಘಟನೆಯು ತನಗೆ “ಮಾನಸಿಕ ಆಘಾತ ಮತ್ತು ಸಂಕಟ” ಉಂಟು ಮಾಡಿದ್ದು, ರೆಸ್ಟೋರೆಂಟ್ ತನಗೆ 1 ರೂಪಾಯಿ ನಷ್ಟ ಪರಿಹಾರ ನೀಡಬೇಕು ಎಂದು ನ್ಯಾಯಾಲಯದಲ್ಲಿ ವಾದಿಸಿದ್ದರು.
ಆದರೆ ರೆಸ್ಟೋರೆಂಟ್ ಪರವಾಗಿ ಹಾಜರಾದ ವಕೀಲರು, 50 ಪೈಸೆಗಿಂತ ಹೆಚ್ಚಿನ ಮೊತ್ತವು ಹತ್ತಿರದ ರೂಪಾಯಿಗೆ ಸೇರುತ್ತದೆ. ಗ್ರಾಹಕನಿಗೆ ಆಹಾರದ ಮೊತ್ತದಲ್ಲಿ ಯಾವುದೇ ಏರಿಕೆ ಮಾಡಿಲ್ಲ. ಬದಲಾಗಿ ತೆರಿಗೆಯಲ್ಲಿ 40ಪೈಸೆಯ ಹೆಚ್ಚಳ ಮಾಡಲಾಗಿದೆ. ಇದು ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯಿದೆ 2017 ರ ಸೆಕ್ಷನ್ 170ರ ಅಡಿಯಲ್ಲಿ ಅನುಮತಿಸಲಾಗಿದೆ ಎಂದು ವಾದಿಸಿದ್ದರು. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಸುತ್ತೋಲೆಗಳನ್ನು ನ್ಯಾಯಾಲಯವು ಪರಿಶೀಲನೆ ನಡೆಸಿ, 40 ಪೈಸೆ ವಸೂಲಿ ಮಾಡಿದ ರೆಸ್ಟೋರೆಂಟ್ ಕ್ರಮದಲ್ಲಿ ಯಾವುದೇ ಲೋಪವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.
ದೂರುದಾರರು ವೈಯಕ್ತಿಕ ಪ್ರಚಾರಕ್ಕಾಗಿ ಪ್ರಕರಣವನ್ನು ಬಳಸಿಕೊಂಡಿರುವುದರಿಂದ ಮತ್ತು ನ್ಯಾಯಾಲಯ, ರೆಸ್ಟೋರೆಂಟ್ ಮತ್ತು ಅದರ ಪ್ರತಿನಿಧಿಗಳ ಸಮಯವನ್ನು ವ್ಯರ್ಥ ಮಾಡಿರುವುದರಿಂದ ಯಾವುದೇ ಪರಿಹಾರಕ್ಕೆ ಅರ್ಹರಲ್ಲ ಎಂದು ತೀರ್ಪು ನೀಡಿದೆ