24ನೇ ತಂತ್ರಜ್ಞಾನ ಶೃಂಗಕ್ಕೆ ಬೆಂಗಳೂರು ಸಜ್ಜು, ನಾಳೆ ಉಪರಾಷ್ಟ್ರಪತಿಯಿಂದ ಉದ್ಘಾಟನೆ

Prasthutha|

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತವಾಗಿರುವ ಬೆಂಗಳೂರು ತಂತ್ರಜ್ಞಾನ ಶೃಂಗದ (ಬಿಟಿಎಸ್) 24ನೇ ವರ್ಷದ ಸಮಾವೇಶವನ್ನು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಬುಧವಾರ ಉದ್ಘಾಟಿಸಲಿದ್ದಾರೆ. ಮೂರು ದಿನಗಳ ಈ ಶೃಂಗವು ನಗರದ ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ನಡೆಯಲಿದೆ ಎಂದು ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

- Advertisement -


ಬಿಟಿಎಸ್-2021ಕ್ಕೆ ಆಗಿರುವ ಸಿದ್ಧತೆಗಳನ್ನು ಮಂಗಳವಾರ ವೀಕ್ಷಿಸಿದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಈ ಶೃಂಗದಲ್ಲಿ 30ಕ್ಕೂ ಹೆಚ್ಚು ದೇಶಗಳು ಭಾಗವಹಿಸುತ್ತಿವೆ. ಯುಎಇ, ಐರೋಪ್ಯ ಒಕ್ಕೂಟ, ವಿಯಟ್ನಾಂ ಮತ್ತು ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಪಾಲ್ಗೊಳ್ಳುತ್ತಿದ್ದು, ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನಟ್ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಸೇರಿದಂತೆ ಹಲವು ಗಣ್ಯರು ಶೃಂಗವನ್ನು ಉದ್ದೇಶಿಸಿ ವರ್ಚುಯಲ್ ರೂಪದಲ್ಲಿ ಮಾತನಾಡಲಿದ್ದಾರೆ ಎಂದು ತಿಳಿಸಿದರು. ಈ ಶೃಂಗದಲ್ಲಿ ಜಾಗತಿಕ ಮಟ್ಟದ 300ಕ್ಕೂ ಹೆಚ್ಚು ಕಂಪನಿಗಳು ಮತ್ತು 5 ಸಾವಿರಕ್ಕೂ ಹೆಚ್ಚು ನವೋದ್ಯಮಗಳು ಸಕ್ರಿಯವಾಗಿ ಭಾಗವಹಿಸಲಿವೆ. ಜತೆಗೆ ವಾಣಿಜ್ಯ ವಲಯದ 20 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಹಾಜರಾಗುತ್ತಿದ್ದು, ವರ್ಚುಯಲ್ ರೂಪದಲ್ಲಿ 5 ಲಕ್ಷಕ್ಕೂ ಹೆಚ್ಚು ಆಸಕ್ತರು ವೀಕ್ಷಿಸಲಿದ್ದಾರೆ ಎಂದು ಅವರು ನುಡಿದರು. ಇದೇ ಮೊದಲ ಬಾರಿಗೆ ಶೃಂಗದಲ್ಲಿ ಭಾರತೀಯ ನಾವೀನ್ಯತಾ ಮೈತ್ರಿಕೂಟ (ಜಿಐಎ) ಉಪಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ. ಇದರ ಜತೆಗೆ ಜಾಗತಿಕ ನಾವೀನ್ಯತಾ ಮೈತ್ರಿಕೂಟ (ಜಿಐಎ)ದ ಅಂಗವಾಗಿ ಜರ್ಮನಿ, ಜಪಾನ್, ಫಿನ್ಲೆಂಡ್, ಲಿಥುವೇನಿಯಾ, ಸ್ವೀಡನ್, ಸ್ವಿಟ್ಜರ್ಲೆಂಡ್ ಮುಂತಾದ ದೇಶಗಳೊಂದಿಗೆ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಡ್ರೈವಿಂಗ್ ದಿ ನೆಕ್ಸ್ಟ್’ ಘೋಷವಾಕ್ಯದಡಿ ನಡೆಯಲಿರುವ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಪ್ರಧಾನವಾಗಿ ಐಟಿ, ಬಿಟಿ, ಕೃಷಿ, ಆರೋಗ್ಯ, ಲಸಿಕೆ, ಸೈಬರ್ ಸೆಕ್ಯುರಿಟಿ, ವೈದ್ಯಕೀಯ ಮತ್ತು ಆರ್ಥಿಕ ತಂತ್ರಜ್ಞಾನಗಳಿಗೆ ಒತ್ತು ಕೊಡಲಾಗುತ್ತಿದೆ. ಈ ಮೂಲಕ ಡಿಜಿಟಲೀಕರಣ, ಹೈಬ್ರಿಡ್ ಮಲ್ಟಿ ಕ್ಲೌಡ್, ಸೆಲ್ ಥೆರಪಿ ಮತ್ತು ಜೀನ್ ಎಡಿಟಿಂಗ್ ಕ್ಷೇತ್ರಗಳಲ್ಲಿ ರಾಜ್ಯವು ಹೊಸ ಛಾಪು ಮೂಡಿಸಲಿದ್ದು, ರೈತ ಸಮುದಾಯ ಮತ್ತು ಮಹಿಳಾ ಉದ್ಯಮಿಗಳ ಸಬಲೀಕರಣಕ್ಕೆ ಹೆಜ್ಜೆ ಇಡಲಾಗುವುದು ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಉಪಸ್ಥಿತರಿದ್ದರು.

- Advertisement -

ರಾಜ್ಯಪಾಲರು, ಸಿಎಂ, ಕೇಂದ್ರ ಸಚಿವರು ಭಾಗಿ
ಶೃಂಗಸಭೆಯ ಉದ್ಘಾಟನೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಐಟಿ ವಿಷನ್ ಗ್ರೂಪ್ ಮುಖ್ಯಸ್ಥರಾದ ಕ್ರಿಸ್ ಗೋಪಾಲಕೃಷ್ಣನ್, ಬಿಟಿ ವಿಷನ್ ಗ್ರೂಪ್ ಮುಖ್ಯಸ್ಥರಾದ ಕಿರಣ್ ಮಜುಂದಾರ್ ಷಾ, ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಎಸ್ ಟಿಪಿಐ ನಿರ್ದೇಶಕ ಶೈಲೇಂದ್ರಕುಮಾರ್ ತ್ಯಾಗಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಅಮೆರಿಕ, ಐರೋಪ್ಯ ಒಕ್ಕೂಟ, ಆಸ್ಟ್ರೇಲಿಯಾ ಭಾಗಿ
ಸಮಾವೇಶದಲ್ಲಿ ಭಾರತ-ಅಮೆರಿಕ ವಾಣಿಜ್ಯ ಸಮಿತಿ ಇದೇ ಮೊದಲ ಬಾರಿಗೆ ಸಹಭಾಗಿತ್ವ ನೀಡುತ್ತಿದೆ. ಜೊತೆಗೆ, ಐರೋಪ್ಯ ಒಕ್ಕೂಟ ಕೂಡ ಪಾಲ್ಗೊಳ್ಳುತ್ತಿದೆ. ಅಮೆರಿಕದಲ್ಲಿ ಜೀವವಿಜ್ಞಾನ ಮತ್ತು ಐಟಿ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸಂಶೋಧನೆ ಮತ್ತು ಆವಿಷ್ಕಾರಗಳ ಲಾಭವನ್ನು ರಾಜ್ಯವು ಪಡೆದುಕೊಳ್ಳಲಿದೆ. ಹಾಗೆಯೇ ಐರೋಪ್ಯ ಒಕ್ಕೂಟದೊಂದಿಗೆ ನವೋದ್ಯಮ ವಲಯ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ವರ್ಚುಯಲ್ ವೀಕ್ಷಣೆ, ನೋಂದಣಿಗೆ ಅವಕಾಶ
ಬಿಟಿಎಸ್-2021ರಲ್ಲಿ ವರ್ಚುಯಲ್ ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು, 320ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳುತ್ತಿವೆ. ಇವುಗಳ ಪೈಕಿ ರಾಜ್ಯ ಸರಕಾರದ `ಎಲಿವೇಟ್’ ಯೋಜನೆಯಡಿ ಆಯ್ಕೆಯಾಗಿರುವ 100 ಮಳಿಗೆಗಳಿರಲಿವೆ. ಆಸಕ್ತರು ಮುಂದಿನ ಲಿಂಕ್ ಮೂಲಕ ನೋಂದಣಿ ಮಾಡಿಸಿಕೊಂಡು, ಸಮಾವೇಶವನ್ನು ವೀಕ್ಷಿಸಬಹುದು:

https://www.bengalurutechsummit.com/web/it_forms/registration-conference.php

Join Whatsapp