ನೀರಿನಲ್ಲಿ ಮುಳುಗಿದ ಬೆಂಗಳೂರು: ರಾಜ್ಯ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Prasthutha|

ಬೆಂಗಳೂರು: ಬಿಜೆಪಿ ಸರ್ಕಾರದ ನಿರ್ಲಕ್ಷ್ಯದಿಂದ ಬೆಂಗಳೂರು ನಗರ ಪ್ರವಾಹದಲ್ಲಿ ಮುಳುಗಿದೆ ಎಂದು ಆರೋಪಿಸಿ ಬೆಂಗಳೂರು ಕೇಂದ್ರ, ದಕ್ಷಿಣ ಮತ್ತು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ವತಿಯಿಂದ ಮಂಗಳವಾರ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

- Advertisement -


ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಕಾರಣ ಅವರು ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿಯನ್ನು ಸಂಪೂರ್ಣವಾಗಿ ಜಾರಿಗೆ ತಂದಿದ್ದಾರೆ. ಬೊಮ್ಮಾಯಿ ಅವರು ಸದಾ ಉತ್ತರ ಪ್ರದೇಶ ಮಾಡೆಲ್ ತರುವುದಾಗಿ ಹೇಳುತ್ತಿದ್ದರು. ಈಗ ಮಹದೇವಪುರ ಸೇರಿದಂತೆ ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ಮೂಲಭೂತ ಸೌಕರ್ಯ ಕುಸಿದಿದೆ. ಬೆಂಗಳೂರಿನ ಇತಿಹಾಸದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜನರನ್ನು ಸಾಗಿಸಲು ಟ್ರ್ಯಾಕ್ಟರ್ ಬಳಸಿರಲಿಲ್ಲ. ಈ ಮಳೆಯ ಮೂಲಕ ಬಿಜೆಪಿ ಸರ್ಕಾರ ಈ ರಾಜ್ಯವನ್ನು ಹಾಗೂ ಬೆಂಗಳೂರಿನ ಆಡಳಿತ ನಡೆಸಲು ತಾವುಗಳು ಯೋಗ್ಯರಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಬೆಂಗಳೂರಿನಲ್ಲಿ ಭಾರಿ ಮಳೆ ಬರುವುದು ಹೊಸತಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ರಸ್ತೆಗಳ ಪಕ್ಕದಲ್ಲಿ ಚರಂಡಿ ಮಾಡುತ್ತಿದ್ದರು. ಬಿಜೆಪಿ ಬಂದಮೇಲೆ ರಸ್ತೆಗಳ ಮೇಲೆ ಬಿಜೆಪಿಯವರು ಚರಂಡಿ ಮಾಡಿದ್ದಾರೆ ಎಂದು ಈ ಮಳೆಯ ಮೂಲಕ ತಿಳಿದಿದೆ. ಎಲ್ಲ ನೀರು ರಸ್ತೆ ಮಧ್ಯದಲ್ಲಿ ಹರಿಯುತ್ತಿದೆ. ಇದು ಬೆಂಗಳೂರು ನಗರದ ಅವೈಜ್ಞಾನಿಕ ಆಡಳಿತಕ್ಕೆ ಸಾಕ್ಷಿ ಎಂದು ಟೀಕಾಪ್ರಹಾರ ನಡೆಸಿದರು.


ಇನ್ನು ವಿಶ್ವದಲ್ಲೇ ಖ್ಯಾತಿ ಪಡೆದಿರುವ ಐಟಿ ಬಿಟಿ ಕಂಪನಿಗಳು ಇರುವ ಪ್ರದೇಶಗಳಲ್ಲಿ, ಯಾವುದೇ ಮೂಲಭೂತ ಸೌಕರ್ಯವನ್ನು ಈ ಸರ್ಕಾರ ನೀಡಿಲ್ಲ. ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ ಅಪ್ ನಗರ, ದೇಶಕ್ಕೆ ಅತಿ ಹೆಚ್ಚು ತೆರಿಗೆ ನೀಡುವ ಬೆಂಗಳೂರು ನಗರಕ್ಕೆ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿರುವುದು ನೋಡಿದರೆ ಉತ್ತರ ಪ್ರದೇಶ ಮಾಡೆಲ್ ಜಾರಿ ಆಗುತ್ತಿರುವುದು ಗೊತ್ತಾಗುತ್ತದೆ ಎಂದು ಆರೋಪಿಸಿದರು.
ಇನ್ನು ಈ ಭಾಗದ ಶಾಸಕರ ವರ್ತನೆ ನೋಡಿದರೆ ಇವರು ಅಭಿವೃದ್ಧಿ ಕಡೆ ಯೋಚಿಸುವವರಲ್ಲ ಎಂಬುದು ತಿಳಿಯುತ್ತದೆ. ಬಿಬಿಎಂಪಿ ಚುನಾವಣೆ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಿತ್ತು. ಅದನ್ನು ಮಾಡಿಲ್ಲ. ಮುಖ್ಯಮಂತ್ರಿಗಳು ಮೋದಿ ಹಾಗೂ ಶಾ ಅವರಿಗೆ 40% ಕಮಿಷನ್ ಹಣ ರವಾನಿಸುತ್ತಿದ್ದು, ನನಗೆ ಯಾವ ತೊಂದರೆ ಇಲ್ಲ ಎಂದು ನಿಶ್ಚಿಂತೆಯಿಂದ ಇದ್ದಾರೆ ಎಂದು ಹರಿಪ್ರಸಾದ್ ಕಿಡಿಕಾರಿದರು.

- Advertisement -


ಜನರ ದುಡ್ಡಲ್ಲಿ 40% ಕಮಿಷನ್ ಹೊಡೆದರೆ ಬೆಂಗಲೂರು ತತ್ತರಿಸುತ್ತದೆ ಎಂಬುದಕ್ಕೆ ಇದೇ ಸಾಕ್ಷಿ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೇವಲ ಐಟಿ- ಬಿಟಿ ಕ್ಷೇತ್ರದಲ್ಲಿ ಮಾತ್ರ ಈ ಪರಿಸ್ಥಿತಿ ಇಲ್ಲ. ಬೆಂಗಳೂರಿನ 600 ಗುಡಿಸಲು ಪ್ರದೇಶಗಳಲ್ಲಿ ಜನ ತತ್ತರಿಸಿದ್ದು, ಕುಡಿಯಲು ನೀರಿಲ್ಲ, ತಿನ್ನಲು ಅನ್ನವಿಲ್ಲದೆ ಪರದಾಡುತ್ತಿದ್ದಾರೆ. ಆದರೂ ಸರ್ಕಾರ ಮೂಕ ಪ್ರೇಕ್ಷಕರಾಗಿ ನೋಡುತ್ತಿದೆ. ಅಭಿವೃದ್ಧಿ ಮಾಡುವ ಸಂಸ್ಥೆಗಳಿಗೂ ಯಾವುದೇ ಸೌಲಭ್ಯ ನೀಡುವುದಿಲ್ಲ ಎಂಬ ಮನಸ್ಥಿತಿಗೆ ಸರ್ಕಾರ ಬಂದಿದೆ. ಐಟಿ ಬಿಟಿ ಕಂಪನೆಗಳು ಈಗಾಗಲೇ ಸರ್ಕಾರಕ್ಕೆ ಎಚ್ಚರಿಸಿದ್ದು, ನೀವು ಅಗತ್ಯ ಮೂಲಭೂತ ಸೌಕರ್ಯ ನೀಡದಿದ್ದರೆ ಬೆಂಗಳೂರು ತ್ಯಜಿಸುತ್ತೇವೆ ಎಂದು ಹೇಳಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಬೆಂಗಳೂರಿಗೆ ಗಂಡಾಂತರ ಕೆಟ್ಟ ಗಳಿಗೆ ಆರಂಭವಾಗುತ್ತದೆ. 2008-13ರವರೆಗೆ ಬೆಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿದಾಗಲೂ ಇದೇ ಅವ್ಯವಸ್ಥೆ ತಾಂಡವವಾಡಿತ್ತು. ಕುಡಿಯುವ ನೀರಿಗಾಗಿ ಕಾವೇರಿ ನೀರನ್ನು ನಾಲ್ಕು ಹಂತಗಳಲ್ಲಿ ಪೂರೈಸಲಾಗಿತ್ತು. ಬೆಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ಸೇವೆ ನೀಡಿದ್ದು ಕಾಂಗ್ರೆಸ್. ಬೆಂಗಳೂರಿನಲ್ಲಿರುವ ಎಲ್ಲ ಫ್ಲೈ ಓವರ್ ಮಾಡಿದ್ದು, ಸ್ವಚ್ಛ ಬೆಂಗಳೂರು ತಂದಿದ್ದು ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ ಇರುವವರೆಗೂ ಕಸದ ಸಮಸ್ಯೆ ಇರಲಿಲ್ಲ. ಬಿಜೆಪಿ ಬಂದ ದಿನದಿಂದ ಕಸದ ಸಮಸ್ಯೆ ಹೆಚ್ಚಾಯ್ತು. ಆಟದ ಮೈದಾನ, ಉದ್ಯನವನ, ಇಂದಿರಾ ಕ್ಯಾಂಟೀನ್, ಟೆಂಡರ್ ಶ್ಯೂರ್ ರಸ್ತೆಗಳು, ವೈಟ್ ಟ್ಯಾಪಿಂಗ್ ರಸ್ತೆ ಆರಂಭವಾಗಿದ್ದು ಕಾಂಗ್ರೆಸ್ ಅವಧಿಯಲ್ಲಿ ಎಂದು ಹೇಳಿದರು.


ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಬಂದಿದ್ದು ಕಾಂಗ್ರೆಸ್ ಸರ್ಕಾರದಿಂದ. ಬೆಂಗಳೂರು ಐಟಿ ಬಿಟಿ ಬಿರುದು ಪಡೆದಿದ್ದು ಕಾಂಗ್ರೆಸ್ ನಿಂದ. ಬೆಂಗಳೂರಿನಲ್ಲಿ ಕೈಗಾರಿಕ ಪ್ರದೇಶ ಆರಂಭಿಸಿದ್ದು ಕಾಂಗ್ರೆಸ್ ಸರ್ಕಾರ. ರಾಜ್ಯದಲ್ಲಿ ಹೆಚ್ಎಎಲ್, ಬಿಇಎಲ್, ಸೇರಿದಂತೆ ಅನೇಕ ಸಂಸ್ಥೆ ತಂದಿದ್ದು, ವಿಧಾನ ಸೌಧ, ವಿಕಾಸ ಸೌಧ ಕಟ್ಟಿದ್ದು ಕಾಂಗ್ರೆಸ್. ನಾವು ಕಟ್ಟಿದ ಬೆಂಗಳೂರನ್ನು ಇಂದು ಬಿಜೆಪಿಯವರು ನಮ್ಮ ಮುಂದೆ ನಾಶ ಮಾಡುತ್ತಿದ್ದಾರೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ರಾಜ್ಯ ಸರ್ಕಾರ ಬೆಂಗಳೂರಿನ ಜನರಿಗೆ ನರಕ ದರ್ಶನ ಮಾಡಿಸುತ್ತಿದೆ. ಈ ಸರ್ಕಾರಕ್ಕೆ ಬದ್ಧತೆ ಇಲ್ಲ. ಹಲವು ದಿನಗಳಿಂದ ಬೆಂಗಳೂರಿನ ಅನೇಕ ಭಾಗಗಳಲ್ಲಿ ಮಳೆಯಿಂದ ಬೋಟಿನಲ್ಲಿ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ವಿಫಲವಾಗಿದೆ. ಐಟಿ ಬಿಟಿ ಕಂಪನಿಗಳ ಸಂಸ್ಥೆ ಮುಖ್ಯಮಂತ್ರಿ ಹಾಗೂ ಪ್ರಧಾನಿಗೆ ಪತ್ರ ಬರೆದು ಬೆಂಗಳೂರು ತ್ಯಜಿಸುವುದಾಗಿ ತಿಳಿಸಿವೆ. ಆದರೂ ರಾಜ್ಯ ಸರ್ಕಾರಕ್ಕೆ ಇದು ಅರ್ಥವಾಗುತ್ತಿಲ್ಲ. ಸಚಿವರುಗಳು ಜಿಲ್ಲಾ ಪ್ರವಾಸ ಮಾಡುತ್ತಿಲ್ಲ. ಜನರ ಕಷ್ಟಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.


ಮಾಜಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಬೆಂಗಳೂರು ಈ ವರ್ಷ ಮಾತ್ರವಲ್ಲ ಕಳೆದ ವರ್ಷವೂ ಭಾರಿ ಮಳೆಗೆ ಮುಳುಗಿತ್ತು. ಆದರೂ ಬಿಜೆಪಿಯಿಂದ ಬೆಂಗಳೂರು ಉಳಿಸಲು ಆಗುತ್ತಿಲ್ಲ. ಬೆಂಗಳೂರು ಉಳಿಸುವ ಬದಲು ಮುಳುಗಿಸುತ್ತಿದ್ದಾರೆ. ಬೆಂಗಳೂರು ಕೇವಲ ನೀರಿನಲ್ಲಿ ಮುಳುಗುತ್ತಿಲ್ಲ, ಬೆಂಗಳೂರಿನ ಘನತೆ, ಖ್ಯಾತಿ, ಗೌರವ ಎಲ್ಲವೂ ಮುಳುಗುತ್ತಿದೆ. ಐಟಿ ಕ್ಯಾಪಿಟಲ್, ಸಿಲಿಕಾನ್ ಕ್ಯಾಪಿಟಲ್, ಸ್ಟಾರ್ಟ್ ಅಪ್ ಕ್ಯಾಪಿಟಲ್ ಎಲ್ಲವೂ ಮುಳುಗುತ್ತಿದೆ. ಬೆಂಗಳೂರು ಉದ್ಯೋಗಗಳು, ಜನರ ಜೀವನ, ಬೆಂಗಳೂರಿನಲ್ಲಿ ಉತ್ಪಾದನೆ, ತೆರಿಗೆ ಆದಾಯ ಎಲ್ಲವೂ ಮುಳುಗುತ್ತಿದೆ. ದೇಶದ ಆಸ್ತಿಯಾಗಿ, ಪ್ರಪಂಚದ ಆಕರ್ಷಕವಾಗಿದ್ದ ಬೆಂಗಳೂರು ಮುಳುಗುತ್ತಿದೆ. ಇದಕ್ಕೆ ನೇರ ಕಾರಣ ಬಿಜೆಪಿಯ ದುರಾಡಳಿತ, 40% ಸರ್ಕಾರ ಬೆಂಗಳೂರನ್ನು, ಜನರ ಜೀವನ ಬಲಿ ಪಡೆಯುತ್ತಿದೆ ಎಂದು ಹೇಳಿದರು.



Join Whatsapp