ಕೊಲ್ಕತ್ತಾ: ಸಾಹಿತ್ಯದ ಕೊಡುಗೆಗಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ನೀಡುವ ವಿಶೇಷ ಪ್ರಶಸ್ತಿಯನ್ನು ವಿರೋಧಿಸಿ ಬಂಗಾಳಿ ಖ್ಯಾತ ಲೇಖಕಿ ಮಂಗಳವಾರ ಅವರಿಗೆ ನೀಡಿದ ಪ್ರಶಸ್ತಿಯನ್ನು ಪಶ್ಚಿಮಬಂಗಾಳ ಬಾಂಗ್ಲಾ ಅಕಾಡೆಮಿಗೆ ಹಿಂದಿರುಗಿಸಿದ್ದಾರೆ.
ರತ್ನಾ ರಶೀದ್ ಬ್ಯಾನರ್ಜಿ ಅವರು 2019 ರಲ್ಲಿ ಅಕಾಡೆಮಿಯಿಂದ ನೀಡಲ್ಪಟ್ಟ ‘ಅನ್ನದ ಶಂಕರ್ ಸ್ಮಾರಕ ಸಮ್ಮಾನ್’ ಅನ್ನು ಹಿಂದಿರುಗಿಸಿದ್ದಾರೆ.
ಶಿಕ್ಷಣ ಸಚಿವರೂ ಆಗಿರುವ ಅಕಾಡೆಮಿ ಅಧ್ಯಕ್ಷೆ ಬ್ರತ್ಯಾ ಬಸು ಅವರಿಗೆ ಬರೆದ ಪತ್ರದಲ್ಲಿ ರಶೀದ್ ಬ್ಯಾನರ್ಜಿ ಅವರು, ಸಿಎಂಗೆ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಹೊಸ ಸಾಹಿತ್ಯ ಪ್ರಶಸ್ತಿಯನ್ನು ನೀಡುವ ನಿರ್ಧಾರದ ಹಿನ್ನೆಲೆಯಲ್ಲಿ ಪ್ರಶಸ್ತಿಯು ತನಗೆ “ಮುಳ್ಳಿನ ಕಿರೀಟ” ವಾಗಿದೆ ಎಂದು ಹೇಳಿದ್ದಾರೆ.
”ತಕ್ಷಣದಿಂದ ಜಾರಿಗೆ ಬರುವಂತೆ ಪ್ರಶಸ್ತಿಯನ್ನು ಹಿಂದಿರುಗಿಸುವ ನನ್ನ ನಿರ್ಧಾರದ ಬಗ್ಗೆ ಪತ್ರದಲ್ಲಿ ತಿಳಿಸಿದ್ದೇನೆ. ಸಿಎಂಗೆ ಸಾಹಿತ್ಯ ಪ್ರಶಸ್ತಿ ನೀಡುವ ಕ್ರಮದಿಂದ ಬರಹಗಾರನಾಗಿ ನನಗೆ ಅವಮಾನವಾಗಿದೆ. ಗೌರವಾನ್ವಿತ ಮುಖ್ಯಮಂತ್ರಿಯವರ ನಿರಂತರ ಸಾಹಿತ್ಯದ ಅನ್ವೇಷಣೆಯನ್ನು ಹೊಗಳಿರುವ ಅಕಾಡೆಮಿಯ ಹೇಳಿಕೆಯು ಸತ್ಯದ ಅಪಹಾಸ್ಯವಾಗಿದೆ ಎಂದು ರಶೀದ್ ಬ್ಯಾನರ್ಜಿ ಪತ್ರದಲ್ಲಿ ತಿಳಿಸಿದ್ದಾರೆ.