ಕೊಲ್ಕತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎರಡಂಕಿ ದಾಟಿದರೆ ಟ್ವಿಟರ್ ತ್ಯಜಿಸುವುದಾಗಿ ಸವಾಲೆಸೆದಿದ್ದ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್, ತಮ್ಮ ಮಾತುಗಳನ್ನು ಮತ್ತೊಮ್ಮೆ ನೆನಪಿಸಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಗೆ ಚುನಾವಣಾ ಆಯೋಗ ಅಧಿಕೃತ ದಿನಾಂಕ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಅವರು ಮತ್ತೊಮ್ಮೆ ಟ್ವೀಟ್ ಮಾಡಿ, ಪರೋಕ್ಷವಾಗಿ ತಮ್ಮ ಈ ಹಿಂದಿನ ಸವಾಲನ್ನು ನೆನಪಿಸಿದ್ದಾರೆ.
“ಪ್ರಜಾಪ್ರಭುತ್ವದ ಉಳಿವಿಗಾಗಿ ಭಾರತದಲ್ಲಿ ನಡೆಯುತ್ತಿರುವ ಪ್ರಮುಖ ಕದನಗಳಲ್ಲಿ ಒಂದು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದೆ. ಇಲ್ಲಿನ ಜನರು ಸರಿಯಾದುದನ್ನು ಆಯ್ಕೆ ಮಾಡುವ ಮೂಲಕ ತಮ್ಮ ಸ್ಪಷ್ಟ ಸಂದೇಶಗಳನ್ನು ತಿಳಿಸಲು ಸಜ್ಜಾಗಿದ್ದಾರೆ. ಪಶ್ಚಿಮ ಬಂಗಾಳ ತನ್ನ ಸ್ವಂತ ಮಗಳನ್ನು ಬಯಸುತ್ತಿದೆ. ನನ್ನ ಕಳೆದ ಟ್ವೀಟ್ ನಲ್ಲಿ ಹೇಳಿದ್ದನ್ನು ಮಾಡಲು ಮೇ2ರ ವರೆಗೆ ಕಾಯಿರಿ” ಎಂದು ಪ್ರಶಾಂತ್ ಟ್ವೀಟ್ ಮಾಡಿದ್ದಾರೆ.
ಭಾರೀ ಕುತೂಹಲ ಹುಟ್ಟಿಸಿರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇ ಬೇಕೆಂದು ಹಠಕ್ಕೆ ಬಿದ್ದಿರುವ ಬಿಜೆಪಿ ಗೆಲ್ಲುವುದಕ್ಕೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಈ ನಡುವೆ, ಮುಖ್ಯವಾಹಿನಿ ಮಾಧ್ಯಮಗಳೂ ಬಿಜೆಪಿ ಗೆಲುವಿಗೆ ಪೂರಕವಾದ ವಾತಾವರಣ ಸೃಷ್ಟಿಸಲು ಸಾಧ್ಯವಿರುವ ಎಲ್ಲಾ ಪರಿಶ್ರಮವನ್ನೂ ಹಾಕುತ್ತಿವೆ. ದೊಡ್ಡ ಪ್ರಮಾಣದಲ್ಲಿ ಟಿಎಂಸಿ ಮುಖಂಡರನ್ನು ಬಿಜೆಪಿ ಸೆಳೆಯುತ್ತಿದೆ. ಆದರೆ, ಯಾರು ಎಷ್ಟು ಸ್ಥಾನಗಳನ್ನು ಗೆಲ್ಲಲಿದ್ದಾರೆ ಎಂಬುದನ್ನು ಮೇ 2ರಂದು ಹೊರಬೀಳಲಿರುವ ಚುನಾವಣಾ ಫಲಿತಾಂಶದ ಬಳಿಕವಷ್ಟೇ ನಿರ್ಧರಿಸಬಹುದು.