ಬೆಳ್ತಂಗಡಿ: ಎ.ಟಿ.ಎಂ ಕೇಂದ್ರದಲ್ಲಿ ಹಣ ತೆಗೆಯುತ್ತಿದ್ದ ವೃದ್ಧನ ಕೈಯಿಂದ ಎ.ಟಿ.ಎಂ ಕಾರ್ಡ್ ಕಸಿದುಕೊಂಡ ಅಪರಿಚಿತರು ಅದರಲ್ಲಿದ್ದ ಹಣ ಡ್ರಾ ಮಾಡಿಕೊಂಡ ಘಟನೆ ಗೇರುಕಟ್ಟೆಯಲ್ಲಿ ನಡೆದಿದ್ದು, ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೇರುಕಟ್ಟೆ ನಿವಾಸಿ ಅಬೂಬಕ್ಕರ್ (71) ಹಣ ಕಳೆದುಕೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ.
ಅಬೂಬಕ್ಕರ್ ಅವರು ಗೇರುಕಟ್ಟೆ ಕೆನರಾ ಬ್ಯಾಂಕಿನ ಎ.ಟಿ.ಎಂ ನಲ್ಲಿ ಅ. 2ರಂದು ಹಣ ತೆಗೆಯಲೆಂದು ಹೋಗಿದ್ದು, ಈ ಸಂದರ್ಭ ಇಬ್ಬರು ಅಪರಿಚಿತ ವ್ಯಕ್ತಿಗಳು ಎ.ಟಿ.ಎಂ ಒಳಗೆ ಬಂದು ಅಬೂಬಕ್ಕರ್ ಅವರಿಗೆ ಸಹಾಯ ಮಾಡಲು ಮುಂದಾಗುತ್ತಾರೆ. ಅಬೂಬಕ್ಕರ್ ಅವರು ಸಹಾಯ ಅಗತ್ಯವಿಲ್ಲ ಎಂದು ಹೇಳಿದರೂ ಅಪರಿಚಿತರು ಅಲ್ಲಿ ಅವರೊಂದಿಗೆ ಇದ್ದರು. ಇದಾದ ಎರಡು ದಿನಗಳ ಬಳಿಕ ಅಬೂಬಕ್ಕರ್ ಮತ್ತೆ ಎ.ಟಿ.ಎಂ ಗೆ ಹೋದಾಗ ಎಟಿಎಂ ಕಾರ್ಡ್ ಕೆಲಸ ಮಾಡದಿರುವುದು ಕಂಡು ಬಂದಿದೆ.
ಬ್ಯಾಂಕಿನಲ್ಲಿ ವಿಚಾರಿಸಿದಾಗ ಖಾತೆಯಲ್ಲಿದ್ದ 49,200 ರೂ. ಎ.ಟಿ.ಎಂ ಕಾರ್ಡ್ ಬಳಸಿ ತೆಗೆದಿರುವುದು ಕಂಡು ಬಂದಿದೆ. ಅಪರಿಚಿತ ವ್ಯಕ್ತಿಗಳು ಅ.2ರಂದು ಎಟಿಎಂ ಕೇಂದ್ರದಲ್ಲಿ ಅಬೂಬಕ್ಕರ್ ಅವರಿಂದ ಎಟಿಎಂ ಕಾರ್ಡ್ ಅಪಹರಿಸಿ ಯಾವುದೋ ಹಳೆಯ ಕಾರ್ಡನ್ನು ಅವರಿಗೆ ನೀಡಿದ್ದರು. ಬಳಿಕ ಕಾರ್ಡನ್ನು ಉಪಯೋಗಿಸಿ ಹಣ ಕಬಳಿಸಿದ್ದರು ಎನ್ನುವ ಅಂಶ ಬೆಳಕಿಗೆ ಬಂದಿದೆ.