ಬೆಳ್ತಂಗಡಿ: ಮಳೆ ನೀರಿನಲ್ಲಿ ಪ್ರವಹಿಸುತ್ತಿದ್ದ ವಿದ್ಯುತ್ ತಗುಲಿ ಯುವತಿ ಸಾವನ್ನಪ್ಪಿದ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಶಿಬಾಜೆ ಗ್ರಾಮದಲ್ಲಿ ಸಂಜೆ ಸಂಭವಿಸಿದೆ.
ಶಿಬಾಜೆ ಗ್ರಾಮದ ಬರ್ಗುಳ ನಿವಾಸಿ ಗಣೇಶ್ ಶೆಟ್ಟಿ ಮತ್ತು ರೋಹಿಣಿ ದಂಪತಿ ಪುತ್ರಿ ಪ್ರತೀಕ್ಷಾ ಶೆಟ್ಟಿ (21) ಮೃತರು. ಕೊಕ್ಕಡದಲ್ಲಿ ಮೆಡಿಕಲ್ ಶಾಪ್ ನಲ್ಲಿ ಪ್ರತಿಕ್ಷಾ ಕೆಲಸ ಮಾಡುತ್ತಿದ್ದರು.
ಮನೆಯ ರಸ್ತೆ ಸಮೀಪ ಪಾರ್ಸೆಲ್ ಬಂದಿದ್ದರಿಂದ ರಸ್ತೆಗೆ ಬಂದಿದ್ದ ಪ್ರತೀಕ್ಷಾಗೆ ಈ ವೇಳೆ ರಸ್ತೆಯಲ್ಲಿ ಹರಿದಾಡುತ್ತಿದ್ದ ನೀರಿನಲ್ಲಿ ಪ್ರವಹಿಸುತ್ತಿದ್ದ ವಿದ್ಯುತ್ನಿಂದ ಆಘಾತವಾಗಿದೆ. ಸ್ಥಳದಲ್ಲಿದ್ದ ತಂದೆ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ರಕ್ಷಿಸಲು ಆಗಲಿಲ್ಲ. ತಂದೆಗೂ ವಿದ್ಯುತ್ ಆಘಾತವಾಗಿದ್ದು, ಅವರು ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.
ಸ್ಟೇ ವೈಯರ್ಗೆ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಅದು ನೀರಿಗೆ ಪ್ರವಹಿಸಿದೆ. ವಿದ್ಯುತ್ ಶಾಕ್ಗೊಳಗಾದ ಪ್ರತೀಕ್ಷಾರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದರೂ ಪ್ರತೀಕ್ಷಾ ಶೆಟ್ಟಿ ಅದಾಗಲೆ ಮೃತಪಟ್ಟಿರುವ ಸಾಧ್ಯತೆ ಬಗ್ಗೆ ವೈದ್ಯರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಯುವತಿಯ ಮೃತದೇಹ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆಯಿಂದ ಮಳೆಗೆ ಸಂಬಂಧಿಸಿದ ಅನಾಹುತದಿಂದ 7 ಜನ ಸಾವನ್ನಪ್ಪಿದ್ದಾರೆ.