►FIR ದಾಖಲಾದ ಎಲ್ಲಾ ಸಾರ್ವಜನಿಕರಿಗೂ ದ.ಕ. ಪೊಲೀಸ್ ಇಲಾಖೆ ಠಾಣಾ ಜಾಮೀನು ಪಡೆಯುವ ವ್ಯವಸ್ಥೆ ಮಾಡಿಕೊಡುತ್ತದೆಯೇ ?
ನವೀನ್ ಸೂರಿಂಜೆ
ಬೆಳ್ತಂಗಡಿ ಪೊಲೀಸ್ ಠಾಣಾ ಮಾದರಿಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಿದರೆ ಲಕ್ಷಾಂತರ ಜನರ ಸಮಯ, ಹಣ, ನ್ಯಾಯಾಲಯಗಳ ಸಮಯ, ಸರ್ಕಾರದ ಕೋಟ್ಯಾಂತರ ಹಣ ಉಳಿಕೆಯಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸ್ಪೋಟಕಗಳು ಪತ್ತೆಯಾದಾಗ ಪೊಲೀಸರು ಅನುಸರಿಸಬೇಕಾದ ನಿಯಮಗಳನ್ನು ಅನುಸರಿಸಿದ್ದಾರೆಯೇ ಎಂಬ ಪ್ರಶ್ನೆಗೆ ಬೆಳ್ತಂಗಡಿ ಪೊಲೀಸರು ಉತ್ತರಿಸಬೇಕಾಗುತ್ತದೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ದ ಒಂದಲ್ಲ, ಎರಡು ಎಫ್ಐಆರ್ ದಾಖಲಾಗುತ್ತದೆ. ಕ್ರೈಂ ನಂಬರ್ 57/2024 ಮತ್ತು ಕ್ರೈಂ ನಂಬರ್ 58/2024 ಎಂದು ಪ್ರತ್ಯೇಕ ಪ್ರತ್ಯೇಕ ಎಫ್ಐಆರ್ ದಾಖಲಾಗುತ್ತದೆ. ಈ ಎಫ್ಐಆರ್ ಗಳಲ್ಲಿ ಆರೋಪಿಯೊಬ್ಬ ಪುನರಾವರ್ತಿತ ಅಪರಾಧ ಮಾಡಿದಾಗ ಹಾಕಲಾಗುವ IPC 149 ಕೂಡಾ ಸೇರಿದೆ. ಅಂದರೆ ಆರೋಪಿ Habitual offender ಎಂದು ಅರ್ಥ. ಕಾನೂನಿನ ಪ್ರಕಾರ ಪೊಲೀಸ್ ಠಾಣೆಯಲ್ಲಿ ಜಾಮೀನು ನೀಡಲಾಗದ IPC 353 ಗೆ ಬೆಳ್ತಂಗಡಿ ಪೊಲೀಸರು ಜಾಮೀನು ನೀಡಿದ್ದು ಹೇಗೆ ? ನ್ಯಾಯಾಧೀಶರ ಅಧಿಕಾರವನ್ನು ಬೆಳ್ತಂಗಡಿ ಪೊಲೀಸರಿಗೆ ನೀಡಿದವರು ಯಾರು ?
ಶಾಸಕ ಹರೀಶ್ ಪೂಂಜಾ ಮಾಡಿರುವ ಕೃತ್ಯವಾದರೂ ಎಂತದ್ದು ? ಅಕ್ರಮವಾಗಿ ಸ್ಪೋಟಕ ಸಂಗ್ರಹಿಸಿದ್ದ ಕ್ರಿಮಿನಲ್ ಗಳನ್ನು ಬಿಡುಗಡೆ ಮಾಡಿ ಎಂದು ಆಗ್ರಹಿಸುವುದು ಕೂಡಾ ಭಯೋತ್ಪಾದನೆಯೇ ಆಗಿದೆ. ಕಲ್ಲು ಗಣಿಗಾರಿಕೆಗೆ ಸ್ಪೋಟಕ ಬಳಸುವುದು ಭಯೋತ್ಪಾದನೆ ಹೇಗಾಗುತ್ತದೆ ಎಂದು ನೀವು ಪ್ರಶ್ನಿಸಬಹುದು.
04 ಎಪ್ರಿಲ್ 2014 ರಂದು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕಲ್ಲು ಗಣಿಗಾರಿಕೆಗೆ ಎಂದು ಸಂಗ್ರಹಿಸಲಾಗಿದ್ದ ಸ್ಪೋಟಕ ಪೊಲೀಸರಿಗೆ ಸಿಕ್ಕಿತ್ತು. ಆಗ ಐಜಿಪಿ ಆಗಿದ್ದವರು ಹಿರಿಯ ಐಪಿಎಸ್ ಅಧಿಕಾರಿ ಹಿತೇಂದ್ರ. ಅವರು ಕಾರ್ಕಳದಲ್ಲಿ ಸ್ಪೋಟಕ ಸಿಕ್ಕ ಪ್ರಕರಣದ ಕಡತವನ್ನು ಎನ್ಐಎಗೆ ರವಾನಿಸಿದ್ದರು. ”ಸ್ಪೋಟಕ ಗಣಿಗಾರಿಕೆಗೇ ಬಳಕೆ ಮಾಡಲು ತಂದಿರಬಹುದು. ಆದರೆ ಸ್ಪೋಟಕ ಸರಬರಾಜುದಾರರು ಯಾರು ? ಅವರು ಯಾರಿಗೆಲ್ಲಾ ಸ್ಪೋಟಕ ಸರಬರಾಜು ಮಾಡಿದ್ದಾರೆ ? ಅವರಿಗೆ ಉಗ್ರರು ಸಂಪರ್ಕ ಇರಬಹುದಾ ? ಸ್ಪೋಟಕ ಸರಬರಾಜುದಾರರು ರಾಷ್ಟ್ರೀಯ ಭದ್ರತಾ ನಿಯಮ ಪಾಲಿಸುತ್ತಿದ್ದಾರಾ ?” ಎಂಬಿತ್ಯಾದಿ ತನಿಖೆಯನ್ನು ಎನ್ಐಎ ಮಾಡಬೇಕಿರುತ್ತದೆ.
16 ಆಗಸ್ಟ್ 2021 ರಲ್ಲಿ ಮಂಗಳೂರಿನ ಬಂದರಿನಲ್ಲಿ ಸ್ಪೋಟಕ ಮಾರುವ ಅಂಗಡಿಗೆ ಪೊಲೀಸರು ದಾಳಿ ನಡೆಸಿದ್ದರು. ಆನಂದ ಎಂಬವರಿಗೆ ಸೇರಿದ್ದ ಸ್ಪೋಟಕ ಮಾರುವ ಅಂಗಡಿಯಲ್ಲಿ ಸ್ಪೋಟಕ ಸಿಗದೇ ಇನ್ನೇನು ಸಿಗುತ್ತದೆ ? ಆದರೆ ಅಂಗಡಿಯಲ್ಲಿ ಅನುಮತಿಗಿಂತ ಜಾಸ್ತಿ ಸ್ಪೋಟಕ ಸಂಗ್ರಹಿಸಲಾಗಿತ್ತು. ಸ್ಪೋಟಕ ವಶಪಡಿಸಿಕೊಂಡ ಪೊಲೀಸರು ಅಂಗಡಿಯ ಮಾಲೀಕರನ್ನು ಜೈಲಿಗೆ ಕಳುಹಿಸಿ ಸುಮ್ಮನಾಗಲಿಲ್ಲ. ಹಿರಿಯ ಐಪಿಎಸ್ ಅಧಿಕಾರಿಗಳು ದಿನಗಟ್ಟಲೆ ಅಂಗಡಿಯ ಪರಿಶೀಲನೆ ನಡೆಸಿದರು. ಅಂಗಡಿ ಮಾಲೀಕನ ಹೆಚ್ಚಿನ ವಿಚಾರಣೆ ಮಾಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ 10 ದಿನಗಳ ಕಾಲ ಕಷ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಿದರು. ಕಲ್ಲು ಗಣಿಗಾರಿಕೆ ಮತ್ತು ಗನ್ ಅಂಗಡಿಗಳಿಗೆ ಸರಬರಾಜು ಮಾಡುತ್ತೇವೆ ಎಂದು ಅಂಗಡಿ ಮಾಲೀಕ ಹೇಳಿದರೂ ಪೊಲೀಸರು ಉಗ್ರಗಾಮಿ ಚಟುವಟಿಕೆಗಳಿಗೆ ಇರುವ ಲಿಂಕ್ ಗಳ ಶೋಧನೆ ಮಾಡಿದರು. ಅದು ಪೊಲೀಸರ ಪ್ರಾಥಮಿಕ ಕರ್ತವ್ಯವೂ ಹೌದು. ಇಂತಹ ಹತ್ತಾರು ಪ್ರಕರಣಗಳು ಮಂಗಳೂರಿನಲ್ಲಿ ದಾಖಲಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲಂತಬೆಟ್ಟು ಎಂಬಲ್ಲಿ ನಡೆಯುತ್ತಿದ್ದ, ಅಕ್ರಮ ಕಲ್ಲುಗಣಿಗಾರಿಕೆ ಹಾಗೂ ಸದ್ರಿ ಗಣಿಗಾರಿಕೆಗಾಗಿ ಶೇಖರಿಸಲಾಗಿದ್ದ, ಅಪಾಯಕಾರಿ ಸ್ಪೋಟಕಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳಾದ ಪ್ರಮೋದ್ ಉಜಿರೆ ಹಾಗೂ ಶಶಿರಾಜ್ ಶೆಟ್ಟಿ (35) ಎಂಬವರುಗಳ ವಿರುದ್ಧ, ಬೆಳ್ತಂಗಡಿ ಠಾಣೆಯಲ್ಲಿ ದಿನಾಂಕ 18.05.2024 ರಂದು ಅ.ಕ್ರ: 56/2024, ಕಲಂ: 9B(1)(b) Explosive act 1884 ಕಲಂ 5 The Explosives Substance Act-1908 ರಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪೈಕಿ ಶಶಿರಾಜ್ ಶೆಟ್ಟಿ ಎಂಬಾತನನ್ನು ವಶಕ್ಕೆ ಪಡೆಯಲಾಗಿರುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತ ಪ್ರಮುಖ ಆರೋಪಿ ಶಶಿರಾಜ್ ರೌಡಿ ಶೀಟರ್ ಕೂಡಾ ಆಗಿದ್ದಾನೆ ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹಾಗಿರುವಾಗ ಸ್ಪೋಟಕ ಪತ್ತೆಯಾದ ರೌಡಿಶೀಟರ್ ನನ್ನು ಬಿಡುಗಡೆ ಮಾಡಿ ಎಂದು ಹೇಳುವುದು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ ಅಲ್ಲವೇ ? ಶಶಿರಾಜ್ ನೇರವಾಗಿ ಭಯೋತ್ಪಾದನೆಯಲ್ಲಿ ಭಾಗಿಯಾಗದೇ ಇರಬಹುದು, ಸ್ಪೋಟಕ ಆತನಿಗೆ ಎಲ್ಲಿಂದ ಸಿಗುತ್ತದೆ ಎಂದು ಪೊಲೀಸರು ತನಿಖೆ ನಡೆಸಬಾರದೇ ? ಪೊಲೀಸರು ಆತನನ್ನು ಜೈಲಿಗೆ ಕಳುಹಿಸಿ ಸುಮ್ಮನಾದರೆ ಹೇಗೆ ? ಕನಿಷ್ಟ ಹತ್ತು ದಿನವಾದರೂ ಪೊಲೀಸ್ ಕಸ್ಟಡಿ ತೆಗೆದುಕೊಳ್ಳಬೇಕು ಅಲ್ಲವೇ ?
ಸ್ಪೋಟಕ ಸಂಗ್ರಹಿಸಿದ್ದ ರೌಡಿಶೀಟರ್ ಮೇಲೆ ಹಾಕಲಾಗಿದ್ದ ಸೆಕ್ಷನ್ ಗಳನ್ನು ಶಾಸಕ ಹರೀಶ್ ಪೂಂಜಾ ಮೇಲೆ ಯಾಕೆ ಹಾಕಿಲ್ಲ ? ಸ್ಪೋಟಕ ಸಂಗ್ರಹಿಸಿದ ಆರೋಪಿಯನ್ನು ರಕ್ಷಿಸುವುದು ಕೂಡಾ ಅದೇ ಸೆಕ್ಷನ್ ಗಳಡಿಯಲ್ಲಿ ಬರುತ್ತದೆ. ಒಮ್ಮೆ ಠಾಣೆಗೆ ನುಗ್ಗಿ ದಮ್ಕಿ ಹಾಕಿದ್ದರೆ ಇನ್ನೊಮ್ಮೆ ಸಾರ್ವಜನಿಕ ಸಭೆ ಮಾಡಿ ದಮ್ಕಿ ಹಾಕಲಾಗುತ್ತದೆ. ಹರೀಶ್ ಪೂಂಜಾ ಮನೆಗೆ ಪೊಲೀಸರು ಹೋದಾಗ ತನ್ನ ಪಡೆಯಿಂದ ಪೊಲೀಸರಿಗೇ ಮುತ್ತಿಗೆ ಹಾಕಿಸುತ್ತಾರೆ. ಹರೀಶ್ ಪೂಂಜಾ ಮಾಡಿರುವ ಕೃತ್ಯಕ್ಕಿಂತ ಕಡಿಮೆ ಡೆಸಿಬಲ್ ಇರುವ ಪ್ರಕರಣಗಳಲ್ಲಿ ಪೊಲೀಸರು ಹೇಗೆ ನಡೆದುಕೊಂಡಿದ್ದಾರೆ ಗೊತ್ತಾ ?
31 ಮೇ 2022, ಮಂಗಳೂರಿನಲ್ಲಿ ಸಮಾವೇಶವೊಂದು ನಡೆಯುತ್ತಿತ್ತು. 28 ವರ್ಷದ ನೌಷಾದ್ ಮತ್ತು 27 ವರ್ಷದ ಹೈದರಾಲಿ ಎಂಬ ಇಬ್ಬರು ಹುಡುಗರು ಸಮಾವೇಶ ಪ್ರಯುಕ್ತ ವಿಡಿಯೋ ಮಾಡುತ್ತಾರೆ. ವಿಡಿಯೋದಲ್ಲಿ ಇರೋದು ಇಷ್ಟೆ “ಈ ಸಮಾವೇಶವನ್ನು ನಾವು ಯಶಸ್ವಿ ಮಾಡಬೇಕು. ಎಲ್ಲಾದರೂ ಪೊಲೀಸರು ತಡೆದರೆ ನಿಮ್ಮ ಜೊತೆ ನಾವಿದ್ದೇವೆ. ನಾವು ಸಮಾವೇಶಕ್ಕೆ ಸೇರೋದನ್ನು ಪೊಲೀಸರು ತಡೆದರೆ ಪೊಲೀಸರ ವಿರುದ್ದ ಧಿಕ್ಕಾರ ಕೂಗಿ. ಭಯಪಡಬೇಡಿ” ಎಂದು ವಿಡಿಯೋ ಮಾಡ್ತಾರೆ. ಇದರಲ್ಲಿ ಪೊಲೀಸರಿಗೆ ಬೆದರಿಕೆ, ನಿಂದನೆ ಎಲ್ಲಿದೆ ? ಆದರೆ ಕಂಕನಾಡಿ ಪೊಲೀಸರು ಎಫ್ಐಆರ್ ದಾಖಲಿಸಿ ಇಬ್ಬರನ್ನೂ ಬಂಧಿಸುತ್ತಾರೆ. ಅಷ್ಟಕ್ಕೆ ಪೊಲೀಸರು ಸುಮ್ಮನಾಗಲ್ಲ, ಈ ಇಬ್ಬರಿಗೆ ಆಶ್ರಯ ನೀಡಿದರೆಂದು ಮಂಗಳೂರು ಪಾಂಡೇಶ್ವರ ನಿವಾಸಿ ಮೊಹಮ್ಮದ್ ಸಯ್ಯದ್ ಅಫ್ರೀದ್ (23), ಕೋಣಾಜೆ ನಿವಾಸಿ ಬಶೀರ್ (40), ಮಂಗಳೂರು ಇನೋಳಿ ನಿವಾಸಿ ಬುಬೇರ್ (32), ಪುತ್ತೂರಿನ ಜಲೀಲ್ (25) ಹಾಗೂ ಪೊಲೀಸರ ತನಿಖೆಗೆ ಅಡ್ಡಿ ಪಡಿಸಿದ್ದ ವಿಟ್ಲ ನಿವಾಸಿ ಮೊಹಮ್ಮದ್ ಯಾಸೀನ್ (25), ಅಫ್ರೀದ್ ಸಾಗ್ (19), ಮಂಗಳೂರಿನ ಶಿವಭಾಗ್ ನಿವಾಸಿ ಮೊಹಮ್ಮದ್ ತುಫೇಲ್ ಸೇರಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹರೀಶ್ ಪೂಂಜಾರಂತೆ ‘ಪೊಲೀಸ್ ಠಾಣೆ ನಿಮ್ಮ ಅಪ್ಪಂದಾ ? ಸ್ಪೋಟಕ ಆರೋಪಿಯನ್ನು ಬಿಡುಗಡೆ ಮಾಡಿ’ ಎಂದು ಈ ಹುಡುಗರು ಹೇಳಿದ್ದರೇ ?
ಹರೀಶ್ ಪೂಂಜಾ ಮಾತು ಮತ್ತು ಈ ಮುಸ್ಲಿಂ ಹುಡುಗರ ಮಾತುಗಳನ್ನು ಏಕಕಾಲದಲ್ಲಿ ಕೇಳಿದ್ರೆ ಪೊಲೀಸ್ ವ್ಯವಸ್ಥೆಯ ಬಗ್ಗೆ ನಿಮಗೆ ವಿಷಾದದ ನಗು ಬರದೇ ಇದ್ದರೆ ನೀವು ಮನುಷ್ಯರೇ ಅಲ್ಲ.
ಹರೀಶ್ ಪೂಂಜಾ ಅವರು ಸ್ಪೋಟಕ ಆರೋಪಿಯನ್ನು ಬಿಡುಗಡೆ ಮಾಡಿ ಎಂದು ಒತ್ತಾಯಿಸಿ ಬೆದರಿಕೆ ಒಡ್ಡಿದರೆ ಪೊಲೀಸರು ಹೆದರಿ ಸ್ಪೋಟಕ ಆರೋಪಿಯನ್ನು ಕಸ್ಟಡಿಗೆ ಪಡೆಯುವುದಿಲ್ಲ. ಎರಡೆರಡು ಎಫ್ಐಆರ್ ಆದರೂ, ಅಧಿಕಾರ ಇಲ್ಲದೇ ಇದ್ದರೂ ಹರೀಶ್ ಪೂಂಜಾಗೆ ಠಾಣಾ ಜಾಮೀನು ನೀಡುತ್ತಾರೆ ಎಂದರೆ ಕಾನೂನಿನ ವ್ಯಂಗ್ಯವಲ್ಲದೇ ಇನ್ನೇನೂ ಅಲ್ಲ.