ಬೆಳ್ಳಾರೆ: ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ನ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆದು ಪ್ರವೀಣ್ ನೆಟ್ಟಾರು ಸಾವನ್ನಪ್ಪಿದರು. ಈ ಹಿನ್ನೆಲೆಯಲ್ಲಿ ಇಂದು ಕೆಲ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಪುತ್ತೂರಿನ ಬೊಳುವಾರಿನಲ್ಲಿ ಸರಕಾರಿ ಬಸ್ ವೊಂದಕ್ಕೆ ಕಲ್ಲೆಸೆದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಮಂಗಳೂರಿಗೆ ಹೋಗುತ್ತಿದ್ದ ಬಸ್ ಗೆ ಬೊಳುವಾರಿನಲ್ಲಿ ಕಲ್ಲೆಸೆಯಲಾಗಿದೆ. ಕಲ್ಲೆಸೆದ ಪರಿಣಾಮ ಬಸ್ ನ ಎದುರಿನ ಗಾಜು ಪುಡಿಯಾಗಿದೆ.
ದಾಳಿಗೊಳಗಾದ ಪ್ರವೀಣ್ ರನ್ನು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ಕಡಬದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ ಶಾಲಾ -ಕಾಲೇಜುಗಳಿಗೆ ರಜೆ ನೀಡಲಾಗಿದ್ದರೆ, ಪುತ್ತೂರಿನ ವಿವೇಕಾನಂದ, ಅಂಬಿಕಾ ಶಿಕ್ಷಣ ಸಂಸ್ಥೆಗಳು ಸೇರಿ ಇತರ ಖಾಸಗಿ ಶಾಲೆಗಳು ರಜೆ ಘೋಷಿಸಿವೆ. ಜಿಲ್ಲೆಯ ಸುಳ್ಳ, ಕಡಬ ಹಾಗು ಪುತ್ತೂರು ತಾಲುಕುಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು, ಉಡುಪಿಯಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಬೆಳ್ಳಾರೆಯಲ್ಲಿ ಒಂದೇ ವಾರದ ಅವಧಿಯಲ್ಲಿ ಬೆಳ್ಳಾರೆ ಎರಡು ಕೊಲೆಗೆ ಸಾಕ್ಷಿಯಾದಂತೆ ಆಗಿದೆ. ಪ್ರವೀಣ್ ಹತ್ಯೆ ನಡೆದ ಸ್ಥಳವನ್ನು ಪೊಲೀಸರು ಕಾವಲು ಕಾಯುತ್ತಿದ್ದು, ವಿಧಿವಿಜ್ಞಾನ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸುವ ತನಕವೂ ಮೃತದೇಹವನ್ನು ಕೊಂಡೊಯ್ಯಲು ಬಿಡುವುದಿಲ್ಲ ಎಂದು ಆಸ್ಪತ್ರೆ ಮುಂಭಾಗ ನೆರೆದಿದ್ದ ಸಂಬಂಧಿಕರು ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪಟ್ಟು ಹಿಡಿದಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಸೋನಾವಣೆ, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ.
ತಡರಾತ್ರಿ 1.30 ರ ಸುಮಾರಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆಗಮಿಸಿ ಪ್ರತಿಭಟನಕಾರರ ಜೊತೆ ಮಾತುಕತೆ ನಡೆಸಿದರು. ದುಷ್ಕೃತ್ಯ ಎಸಗಿದವರನ್ನು ಬಂಧಿಸಿ ಕಠಿಣ ಶಿಕ್ಷೆ ಕೊಡಿಸಲಾಗುವುದು. ಈಗಾಗಲೇ ಪೊಲೀಸ್ ಇಲಾಖೆ ತನಿಖೆಯಲ್ಲಿ ತೊಡಗಿದೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದರು.
ಜಿಲ್ಲಾಧಿಕಾರಿ ಮನವಿ:
ಮೃತರ ಕುಟುಂಬಕ್ಕೆ ಒಂದು ಕೋಟಿ ರೂ ಪರಿಹಾರ ನೀಡಬೇಕೆಂಬ ಮನವಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ನೀಡಿದ ಭರವಸೆಯ ಬಳಿಕ ಪ್ರತಿಭಟನೆ ಹಿಂದೆಗೆದುಕೊಳ್ಳಲಾಯಿತು.
ನೆಟ್ಟಾರು ಭೀಕರ ಕೊಲೆ ಪ್ರಕರಣದ ಹಂತಕರ ಪತ್ತೆಗೆ ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ. ಆರೋಪಿಗಳ ಬೆನ್ನು ಹತ್ತಿ ಕೇರಳ, ಮಡಿಕೇರಿ, ಹಾಸನಕ್ಕೆ ಪೊಲೀಸರು ಮೂರು ತಂಡಗಳು ತೆರಳಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರುಷಿಕೇಷ್ ಸೋನಾವಣೆ ಮಾಹಿತಿ ನೀಡಿದ್ದಾರೆ.
ಕೊಲೆ ಆರೋಪಿಗಳಿಗಾಗಿ ಕೇರಳ ಗಡಿ ಪ್ರದೇಶ ಹಾಗೂ ಪುತ್ತೂರಿನ ಸುತ್ತಮುತ್ತ ನಾಕಾಬಂದಿ ಹಾಕಿ ವಾಹನಗಳನ್ನು ತಲಾಶ್ ಮಾಡಲಾಗುತ್ತಿದೆ.