ಬೆಳಗಾವಿ: ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದರಿಂದ ಗಾಯಗೊಂಡ ಮಹಿಳೆಯನ್ನು ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ದೌಡಾಯಿಸಿದ ಗೃಹಸಚಿವ ಡಾ.ಜಿ.ಪರಮೇಶ್ವರ ಮಹಿಳೆ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ, ‘ಮಹಿಳೆಯನ್ನು ಬೆತ್ತಲೆಗೊಳಿಸಿ, ಕಂಬಕ್ಕೆ ಕಟ್ಟಿ ಹೊಡೆಯಲಾಗಿದೆ. ಇದೊಂದು ಅಮಾನವೀಯ ಘಟನೆ. ನಡೆಯಬಾರದು ನಡೆದಿದೆ. 24 ವರ್ಷದ ಯುವಕ ದುಂಡಪ್ಪ ಹಾಗೂ ಪ್ರಿಯಾಂಕ ಎಂಬ ಯುವತಿಯ ಪ್ರೇಮ ಪ್ರಕರಣ ಇದಕ್ಕೆ ಕಾರಣವಾಗಿದೆ. 8ರಿಂದ 10 ಜನ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ. ಈಗಾಗಲೇ 7 ಮಂದಿಯನ್ನು ಬಂಧಿಸಲಾಗಿದೆ. ಇನ್ನಿಬ್ಬರ ಹುಡುಕಾಟ ನಡೆದಿದೆ. ಪೊಲೀಸರು ತುರ್ತು ಕ್ರಮ ಜರುಗಿಸಿದ್ದಾರೆ’ ಎಂದರು.