ಬೆಳಗಾವಿ: ಕಳೆದ ವಾರ ಬೆಳಗಾವಿಯಲ್ಲಿ ಅರ್ಬಾಝ್ ಅಫ್ತಾಬ್ ಎಂಬ ಯುವಕನ ಹತ್ಯೆಗೆ ಯುವತಿಯ ಪೋಷಕರು ಸುಪಾರಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಸೇನೆಯ ಮುಖಂಡ ಸೇರಿದಂತೆ ಒಟ್ಟು 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅನ್ಯ ಧರ್ಮದ ಯುವತಿಯನ್ನು ಪ್ರೇಮಿಸಿದ ಕಾರಣಕ್ಕಾಗಿ ಅರ್ಬಾಝ್ ಎಂಬ ಯುವಕನನ್ನು ತಲೆ ಮತ್ತು ಕಾಲುಗಳನ್ನು ಕತ್ತರಿಸಿ ಕೊಲೆಗೈದು ರೈಲ್ವೇ ಹಳಿಯಲ್ಲಿ ಎಸೆಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪೋಷಕರನ್ನೂ ಬಂಧಿಸಲಾಗಿದೆ.
ಬಂಧಿತರನ್ನು ರಾಮಸೇನೆಯ ಮುಖಂಡ ಪುಂಡಲೀಕ ಮಹಾರಾಜ್ (39), ಯುವತಿಯ ತಂದೆ ಈರಪ್ಪ ಬಸವಣ್ಣಿ ಕುಂಬಾರ (54) ತಾಯಿ ಸುಶೀಲ ಈರಪ್ಪ (42), ಮಾರುತಿ ಪ್ರಹ್ಲಾದ್ (30), ಮಂಜುನಾಥ ತುಕಾರಾಂ (25), ಕುತಬುದ್ಧಿನ್ ಅಲ್ಲಾಬಕ್ಷ್ (36) ಗಣಪತಿ ಜ್ಞಾನೇಶ್ವರ (27), , ಪ್ರಶಾಂತ್ ಕಲ್ಲಪ್ಪ (28), ಪ್ರವೀಣ್ ಶಂಕರ್ (28) ಮತ್ತು ಶ್ರೀಧರ್ ಮಹಾದೇವ ದೋನಿ ಎಂದು ಗುರುತಿಸಲಾಗಿದೆ.
ಸೆಪ್ಟೆಂಬರ್ 27 ರಂದು ಆತನ ಮನೆಯಿಂದ ನಾಪತ್ತೆಯಾಗಿದ್ದ ಅರ್ಬಾಝ್ ಮರುದಿನ ಆತನ ಮೃತದೇಹ ಛಿದ್ರಗೊಂಡ ಸ್ಥಿತಿಯಲ್ಲಿ ರೈಲ್ವೇ ಹಳಿಯಲ್ಲಿ ಪತ್ತೆಯಾಗಿತ್ತು. ಮೃತನ ತಾಯಿ ನಝೀಮಾ ಶೇಖ್, ಅನ್ಯ ಧರ್ಮದ ಯುವತಿಯನ್ನು ಪ್ರೀತಿಸಿದ ಹಿನ್ನೆಲೆಯಲ್ಲಿ ಮಗನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷಣ್ ನಿಂಬರಗಿ ಅವರು ಅರ್ಬಾಝ್ ಕೊಲೆಗೆ ಆತನ ಸ್ನೇಹಿತೆಯ ಪೋಷಕರಾದ ಈರಪ್ಪ ಮತ್ತು ಸುಶೀಲ ಈರಪ್ಪ ಸುಪಾರಿ ಕೊಲೆಗಾರರನ್ನು ನೇಮಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ. ರಾಮಸೇನೆಯ ಮುಖಂಡ ಪುಂಡಲೀಕ ಈ ಪ್ರಕರಣ ಪ್ರಮುಖ ಆರೋಪಿ ಎಂದು ಅವರು ತಿಳಿಸಿದ್ದಾರೆ.