ಬೆಳಗಾವಿ: ಮದುವೆ ಮೆರವಣಿಗೆ ವೇಳೆ ಕನ್ನಡಿಗರ ಮೇಲೆ ಎಂಇಎಸ್ ಪುಂಡರ ದಾಳಿ

Prasthutha|

ಬೆಳಗಾವಿ: ಮದುವೆ ಮೆರವಣಿಗೆಯಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಮಹಾರಾಷ್ಟ್ರ ಏಕೀಕರಣ ಸಮಿತಿ  ಕಾರ್ಯಕರ್ತರು ಕನ್ನಡಿಗರ ಮೇಲೆ ಹಲ್ಲೆ ನಡೆಸಿದ ಘಟನೆ ತಾಲೂಕಿನ ಧಾಮಣೆ ಗ್ರಾಮದಿಂದ ವರದಿಯಾಗಿದೆ.

- Advertisement -

ಘಟನೆಯಲ್ಲಿ ವರ ಸಿದ್ದು ಸೈಬಣ್ಣವರ, ವಧು ರೇಷ್ಮಾ ಸೇರಿ ಐವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

‘ನಾವು ವಧು–ವರನನ್ನು ಮನೆಗೆ ಕರೆದುಕೊಂಡು ಹೋಗುವ  ವೇಳೆ ಮೆರವಣಿಗೆಯಲ್ಲಿ ಕನ್ನಡ ಬಾವುಟ ಹಿಡಿದುಕೊಂಡು ಕನ್ನಡ ಗೀತೆಗೆ ಕುಣಿಯುತ್ತಿದ್ದೆವು. ಇದನ್ನು ನೋಡಿ ಸಹಿಸಲಾಗದ ಎಂಇಎಸ್ ನವರು ನಮ್ಮ ಮೇಲೆ ಆಕ್ರಮಣ ಮಾಡಿದ್ದಾರೆ.  ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಅವರು ಸ್ಪಂದಿಸುತ್ತಿಲ್ಲ ಎಂದು ಗಾಯಾಳುಗಳು ಆರೋಪಿಸಿದ್ದಾರೆ.

- Advertisement -

‘ಅಣ್ಣನ ಮದುವೆ ಮೆರವಣಿಗೆಯಲ್ಲಿ ಕನ್ನಡ ಧ್ವಜ ಹಿಡಿದು ಕುಣಿಯುತ್ತಿದ್ದ ವೇಳೆ ಎಂಇಎಸ್ ನವರು ನಮ್ಮೊಂದಿಗೆ ಜಗಳ ಪ್ರಾಂಭಿಸಿದ್ದಾರೆ. ಅಜಯ ಯಳ್ಳೂರಕರ, ಮಹೇಶ ಯಳ್ಳೂರಕರ, ಆಕಾಶ ಚೌಗುಲೆ ಮುಂತಾದವರು ಸೇರಿ ಎರಡು ತಿಂಗಳ ಹಿಂದೆ ನಮ್ಮ ಗಾಡಿಯನ್ನೂ ಸುಟ್ಟಿದ್ದರು. ನಮ್ಮ ಮನೆ ಮುಂದೆ ಚನ್ನಮ್ಮನ ಫಲಕ ಹಾಕಿದ್ದರಿಂದ  ಪದೇ ಪದೇ ಜಗಳ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ’ ಎಂದು ಚಿಕಿತ್ಸೆ ಪಡೆಯುತ್ತಿರುವ ಭರಮಾ ಸೈಬಣ್ಣವರ ಆರೋಪಿಸಿದ್ದಾರೆ.



Join Whatsapp